ಸಿನಿಮಾ ಡೈಲಾಗ್ ಹೊಡೆದ ಮಹಿಳಾ ಕಾನ್ಸ್ಟೇಬಲ್ ಗೆ ಜಾಕ್ಪಾಟ್: ವೆಬ್ ಸಿರೀಸ್, ಮಾಡೆಲಿಂಗ್ ನಲ್ಲಿ ನಟಿಸಲು ಆಫರ್
Tuesday, September 21, 2021
ಆಗ್ರಾ(ಉತ್ತರ ಪ್ರದೇಶ): ಪೊಲೀಸ್ ಸಮವಸ್ತ್ರ ಧರಿಸಿ, ರಿವಾಲ್ವರ್ ಹಿಡಿದು 'ರಂಗ್ಭಾಜಿ' ಸಿನಿಮಾ ಡೈಲಾಗ್ ಹೇಳಿ ಆ ವೀಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹರಿಯಬಿಟ್ಟು, ಪೊಲೀಸ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಪ್ರದೇಶದ ಮಹಿಳಾ ಕಾನ್ಸ್ಟೇಬಲ್ ಪ್ರಿಯಾಂಕಾ ಮಿಶ್ರಾಗೆ ಇದೀಗ ಫಾಲೋವರ್ಸ್ ಹೆಚ್ಚಾಗಿದ್ದು, ಮಾಡೆಲ್ ಲೋಕದ ರಾಣಿಯಾಗಿ ಮೆರೆಯುತ್ತಿದ್ದಾರೆ.
2020ರಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಇಲಾಖೆ ಸೇರಿದ್ದ ಪ್ರಿಯಾಂಕಾ ಮಿಶ್ರಾ ಸಿನಿಮಾ ಡೈಲಾಗ್ ವೀಡಿಯೋ ವೈರಲ್ ಆಗುತ್ತಿದ್ದಂತೆ ವಿವಾದ ಹುಟ್ಟುಹಾಕಿತ್ತು. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಿದ್ದರು. ಇದರ ಬೆನ್ನಲ್ಲೇ ಅವರು ಕೆಲಸಕ್ಕೆ ರಾಜೀನಾಮೆ ನೀಡಿದ್ದರು.
ಆದರೆ ಇನ್ಸ್ಟ್ರಾಗ್ರಾಂನಲ್ಲಿ ಅವರ ವೀಡಿಯೋ ಭಾರೀ ಟ್ರೆಂಡ್ ಆಯಿತು. ಪರಿಣಾಮ ಅವ ಫಾಲೋವರ್ಸ್ ಗಳ ಸಂಖ್ಯೆಯಲ್ಲಿಯೂ ಏರಿಕೆಯಾಯಿತು. ಕೆಲವೇ ದಿನಗಳಲ್ಲಿ ಇನ್ಸ್ಟಾಗ್ರಾಂ ಫಾಲೋವರ್ಸ್ಗಳ ಸಂಖ್ಯೆ 3,700 ರಿಂದ 15,400ಕ್ಕೆ ಏರಿಕೆಯಾಗಿತ್ತು. ಇದಾಗುತ್ತಿದ್ದಂತೆ ಪ್ರಿಯಾಂಕಾ ಮಿಶ್ರಾಗೆ ವೆಬ್ ಸಿರೀಸ್ ಹಾಗೂ ಮಾಡೆಲಿಂಗ್ಗಳಲ್ಲಿ ಕ್ಷೇತ್ರಗಳಿಂದ ಆಫರ್ಗಳ ಸುರಿಮಳೆಯಾಗುತ್ತಿದೆಯಂತೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ 'ಉತ್ತಮ ಅವಕಾಶ ಸಿಕ್ಕಲ್ಲಿ ಖಂಡಿತವಾಗಿಯೂ ಮಾಡೆಲಿಂಗ್ ಹಾಗೂ ವೆಬ್ ಸರಣಿಗಳಲ್ಲಿ ನಟನೆ ಮಾಡುತ್ತೇನೆ. ಆದರೆ ಇಲ್ಲಿಯವರೆಗೆ ಯಾವುದೇ ಆಫರ್ ಅನ್ನು ಸ್ವೀಕರಿಸಿಲ್ಲ. ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ' ಎಂದು ಹೇಳಿದ್ದಾರೆ.