ಕೊರೊನಾ ಲಸಿಕೆ ಹಾಕಿಕೊಳ್ಳಲು ಬಂದವರಿಗೆ ಆ್ಯಂಟಿ ರೇಬಿಸ್ ಲಸಿಕೆ: ವೈದ್ಯರ ಎಡವಟ್ಟು
Thursday, September 30, 2021
ಮುಂಬೈ: ಕೊರೊನಾ ಲಸಿಕೆ ಹಾಕಿಕೊಳ್ಳಲು ಬಂದವರಿಗೆ ಆ್ಯಂಟಿ ರೇಬಿಸ್ ಲಸಿಕೆ ನೀಡಿರುವ ಮಹಾ ಎಡವಟ್ಟೊಂದು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್‍ನನ್ನು ಅಮಾನತು ಮಾಡಲಾಗಿದೆ.
ಮಹಾರಾಷ್ಟ್ರದ ಥಾಣೆಯ ಕಲ್ವಾದಲ್ಲಿರುವ ಸರ್ಕಾರಿ ಮೆಡಿಕಲ್ ಸೆಂಟರ್ ಗೆ ರಾಜಕುಮಾರ್ ಯಾದವ್ ಎಂಬವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದರು. ಆದರೆ ಅಲ್ಲಿಯೇ ಆ್ಯಂಟಿ ರೇಬಿಸ್ ಲಸಿಕೆ ಹಾಕುವ ಕಾರ್ಯವೂ ನಡೆಯುತ್ತಿತ್ತು. ಹಾಗಾಗಿ ಎರಡು ಲಸಿಕೆಗೆ ಬೇರೆ ಬೇರೆ ಕ್ಯೂ ಇತ್ತು.
ಆದರೆ ರಾಜಕುಮಾರ್ ಯಾದವ್ ಅವರು ಲಸಿಕೆ ಹಾಕಿಸಿಕೊಳ್ಳಲು ಬಂದಾಗ ಅವರು ಯಾವ ಲಸಿಕೆ ಹಾಕಿಕೊಳ್ಳಲು ಬಂದಿದ್ದಾರೆಂದು ಕೇಳದೆ ವೈದ್ಯರು ರೇಬಿಸ್ ಲಸಿಕೆಯನ್ನು ಹಾಕಿದ್ದಾರೆ. ಬಳಿಕ ರಾಜಕುಮಾರ್ ಯಾದವ್ ಎರಡನೆಯ ಲಸಿಕೆ ಹಾಕಿಸಿಕೊಳ್ಳಲು ಯಾವಾಗ ಬರಬೇಕು ಎಂದು ಯಾದವ್ ವೈದ್ಯರಿಗೆ ಆದ ಎಡವಟ್ಟಿನ ಬಗ್ಗೆ ತಿಳಿದದ್ದು.
ಆಗ ಅವರು ರೇಬಿಸ್ ಲಸಿಕೆ ಹಾಕಿರುವ ವಿಷಯ ಹೇಳಿದ್ದಾರೆ. ಇದರಿಂದ ವೈದ್ಯರ ವಿರುದ್ಧ ದೂರು ದಾಖಲು ಮಾಡಲಾಗಿದೆ. ರಾಜಕುಮಾರ್ ಯಾದವ್ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರು ಉಂಟಾಗಿಲ್ಲ. ಆದರೆ ಯಾವ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದಾರೆಂದು ವಿಚಾರಿಸದೆ ಲಸಿಕೆ ಹಾಕಿರುವ ವೈದ್ಯರು ಹಾಗೂ ನರ್ಸ ನ್ನು ಅಮಾನತು ಮಾಡಲಾಗಿದೆ ಎಂದು ಆಸ್ಪತ್ರೆ ಹೇಳಿದೆ. ರಾಜಕುಮಾರ್ ಯಾದವ್ ತಪ್ಪಾಗಿ ರೇಬಿಸ್ ಕ್ಯೂನಲ್ಲಿ ನಿಂತಿದ್ದರಿಂದ ಈ ರೀತಿ ತಪ್ಪಾಗಿದೆ. ಮುಂದೆ ಈ ರೀತಿ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಆಸ್ಪತ್ರೆಯ ಹಿರಿಯ ವೈದ್ಯರು ಭರವಸೆ ನೀಡಿದ್ದಾರೆ.