ನೀರು ಕೊಟ್ಟದ್ದು ಗೊತ್ತು, ಎಚ್ಚರವಾದಾಗ ವೀಡಿಯೋ ತೋರಿಸಿದರು: ಸಂಸದನ ಮೇಲೆ ಅತ್ಯಾಚಾರ ಕೇಸು ದಾಖಲು
Tuesday, September 14, 2021
ನವದೆಹಲಿ: ಚಿರಾಗ್ ಪಾಸ್ವಾನ್ರ ಕಸಿನ್, ಎಲ್ ಜೆಪಿ ಸಂಸದ ಪ್ರಿನ್ಸ್ ರಾಜ್ ಪಾಸ್ವಾನ್ ವಿರುದ್ಧ ಎಲ್ ಜೆಪಿ ಕಾರ್ಯಕರ್ತೆ ಯುವತಿಯೋರ್ವರು ಅತ್ಯಾಚಾರ ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಪ್ರಿನ್ಸ್ ರಾಜ್ ಪಾಸ್ವಾನ್ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಮೂರು ತಿಂಗಳ ಹಿಂದೆಯೇ ಸಂತ್ರಸ್ತ ಯುವತಿ ದೆಹಲಿಯ ಕನಾಟ್ ಪ್ರದೇಶದಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಪ್ರಕರಣ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ನ್ಯಾಯಾಲಯದ ನಿರ್ದೇಶನದ ಅನ್ವಯ ಪೊಲೀಸರು ಸಂಸದ ಪ್ರಿನ್ಸ್ ರಾಜ್ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.
ಯುವತಿ ದೂರಿನಲ್ಲಿ 'ತಾನು ಎಲ್ಜೆಪಿ ಕಾರ್ಯಕರ್ತೆಯಾಗಿದ್ದು, ಪ್ರಿನ್ಸ್ ರಾಜ್ರನ್ನು ಕಳೆದ ವರ್ಷ ಮೊದಲ ಬಾರಿ ಪಕ್ಷದ ಕಚೇರಿಯಲ್ಲಿ ಭೇಟಿಯಾಗಿದ್ದೆ. ಆ ಬಳಿಕ ನಾವು ಸಂಪರ್ಕದಲ್ಲಿದ್ದು, ಹಲವಾರು ಸಭೆಗಳಲ್ಲಿ ಭೇಟಿಯಾಗಿದ್ದೆವು. ಅದೇ ರೀತಿ ಸಭೆಯೊಂದರಲ್ಲಿ ನಾವು ಭೇಟಿಯಾಗಿದ್ದೆವು, ಅಲ್ಲಿ ನಾನು ಕುಡಿಯಲೆಂದು ಟೇಬಲ್ ಮೇಲಿದ್ದ ನೀರಿನ ಬಾಟಲ್ ತೆಗೆದುಕೊಂಡಿದ್ದೆ. ಆದರೆ ಅಲ್ಲೇ ಇದ್ದ, ಪ್ರಿನ್ಸ್ ರಾಜ್ ಪಾಸ್ವಾನ್, ಆ ನೀರು ಬೇಡ ತಾನೇ ಕೊಡುತ್ತೇನೆ ಎಂದು ಹೇಳಿ ಗ್ಲಾಸ್ನಲ್ಲಿ ನೀರು ಕೊಟ್ಟರು. ಅದನ್ನು ಕುಡಿಯುತ್ತಿದ್ದಂತೆ ಎಚ್ಚರ ತಪ್ಪಿಬಿದ್ದೆ.
ಮರಳಿ ನನಗೆ ಎಚ್ಚರ ಆಗುವಾಗ ನನ್ನ ತಲೆ ಪ್ರಿನ್ಸ್ ರಾಜ್ ಭುಜದ ಮೇಲೆ ಇತ್ತು. ಆಗ ಅವರು ನೀನೀಗ ಅಸ್ವಸ್ಥಳಾಗಿರುವೆ, ಮನೆಗೆ ಹೋಗು ಎಂದು ಹೇಳಿದರು. ನನಗೆ ಅನುಮಾನ ಬಂದು, ಎಚ್ಚರ ತಪ್ಪಿದಾಗ ಏನಾಯಿತು ಎಂದು ಕೇಳಿದ್ದಕ್ಕೆ, ಒಂದು ವಿಡಿಯೋ ತೋರಿಸಿದರು. ನನಗೆ ಪ್ರಜ್ಞೆ ಇಲ್ಲದಾಗ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದರು. ವೀಡಿಯೋದಲ್ಲಿ ಅವರ ಮುಖ ಕಾಣಿಸುತ್ತಿಲ್ಲ. ಅದೇ ವೀಡಿಯೋ ಇಟ್ಟುಕೊಂಡು, ತನ್ನನ್ನು ವಿವಾಹವಾಗುವಂತೆ ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದಲ್ಲಿ ವೀಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಆರೋಪ ನಿರಾಕರಿಸಿರುವ ಸಂಸದ ಪ್ರಿನ್ಸ್ ರಾಜ್ ಪಾಸ್ವಾನ್ 'ಆಕೆ ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದ್ದಾಳೆ ಎಂದು ದೂರುದಾರ ಯುವತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಮಾನ ಹಾನಿ ಮಾಡಲಾಗಿದೆ ಎಂದು ಹೇಳಿ, ಜೂನ್ 17ರಂದೇ ಒಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.