ಯುವತಿಯನ್ನು ನಿರಂತರ ಅತ್ಯಾಚಾರ ನಡೆಸಿದ ಪೊಲೀಸ್ ಕಾನ್ ಸ್ಟೇಬಲ್: ಈತ ಸಂತ್ರಸ್ತೆಯ ಸ್ವಂತ ಚಿಕ್ಕಪ್ಪ!
Wednesday, September 15, 2021
ಉತ್ತರ ಪ್ರದೇಶ: ಯುವತಿಯೋರ್ವಳ ಮೇಲೆ ಟ್ರಾಫಿಕ್ ಪೊಲೀಸ್ ಕಾನ್ ಸ್ಟೇಬಲ್ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದು, ಕೃತ್ಯದ ವೀಡಿಯೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಬ್ಲಾಕ್ಮೇಲ್ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯಿಂದ ಬೇಸತ್ತು ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ.
ಯುವತಿಯ ಮೇಲೆ ಅತ್ಯಾಚಾರ ಎಸುಗಿರುವ ಪೊಲೀಸ್ ಕಾನ್ ಸ್ಟೇಬಲ್ ಯುವತಿಯ ಸ್ವಂತ ಚಿಕ್ಕಪ್ಪನಾಗಿದ್ದು, ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದಾನೆ ಎನ್ನಲಾಗಿದೆ. ಪರಿಣಾಮ ಮನನೊಂದ ಯುವತಿ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಪೊಲೀಸರು ಆಕೆಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಿರಂತರ ಅತ್ಯಾಚಾರದ ಪರಿಣಾಮ ಯುವತಿ ಗರ್ಭಿಣಿಯಾಗಿದ್ದಳು. ಆಗ ಆತ ಗರ್ಭನಿರೋಧಕ ಮಾತ್ರೆ ನೀಡಿದ್ದನು ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ. ಕಳೆದ ಭಾನುವಾರ ಹೊಟೇಲ್ ವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಆದರೆ ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಆಗ ಆಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ಆತನಿಂದ ತಪ್ಪಿಸಿಕೊಂಡ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಇದರ ಬೆನ್ನಲ್ಲೇ ಯುವತಿ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ತೆರಳಿರುವ ಪೊಲೀಸರು ಯುವತಿಯ ರಕ್ಷಣೆ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಯುವತಿಯ ಹೇಳಿಕೆ ದಾಖಲು ಮಾಡಲಾಗಿದ್ದು, ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ. ಶೀಘ್ರವೇ ಆತನ ಬಂಧನ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಪ್ರಮೋದ್ ಕುಮಾರ್ ಭರವಸೆ ನೀಡಿದ್ದಾರೆ.