ಪ್ರೇತ ಬಿಡಿಸುವೆನಂದು ಅಪ್ರಾಪ್ತೆಯ ಅತ್ಯಾಚಾರ: ಮಂತ್ರವಾದಿ, ಬಾಲಕಿಯ ತಾಯಿ ಬಂಧನ
Wednesday, September 22, 2021
ಮುಂಬೈ: ಮಾವನ ಪ್ರೇತ ಬಾಧೆ ಇದೆಯೆಂದು ಹೇಳಿ 16 ವರ್ಷದ ಅಪ್ರಾಪ್ತೆಯನ್ನು ಕಾಡಿಗೆ ಕರೆದೊಯ್ದ
ಮಂತ್ರವಾದಿಯೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಥಾಣೆಯ ಭೀವಂಡಿ ಎಂಬಲ್ಲಿ ನಡೆದಿದೆ. ಮಂತ್ರವಾದಿಯ ಈ ಕೃತ್ಯಕ್ಕೆ ಹುಡುಗಿಯ ತಾಯಿಯೇ ಸಹಕರಿಸಿದ್ದಾಳೆಂಬ ಆರೋಪ ಕೇಳಿಬಂದಿದೆ. ಇದೀಗ ಮಂತ್ರವಾದಿ ಮತ್ತು ಬಾಲಕಿಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೃತ್ಯ ನಡೆದ ಬಳಿಕ ಅಲ್ಲಿಂದ ಪಾರಾದ ಬಾಲಕಿ, ನಾರ್ಪೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ ಆಕೆ 'ತನಗೆ ತೀವ್ರವಾದ ಕತ್ತು ನೋವಿತ್ತು. ಈ ಹಿನ್ನೆಲೆಯಲ್ಲಿ ತಾಯಿಯ ಜೊತೆ ಮಂತ್ರವಾದಿ ಬಳಿ ತೆರಳಿದಾಗ, ಆತ ಮಾವನ ಪ್ರೇತ ಬಾಧೆಯಿದೆ' ಎಂದು ಹೇಳಿದ್ದಾನೆ. ಅಲ್ಲದೆ ಅದನ್ನು ನಿವಾರಣೆ ಮಾಡುತ್ತೇನೆಂದು ತಾಯಿ ಜೊತೆಗೆ ಕಾಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾಳೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಾರ್ಪೋಲಿ ಪೊಲೀಸ್ ಬಾಲಕಿಯ ತಾಯಿ ಮತ್ತು ಮಂತ್ರವಾದಿಯನ್ನು ವಶಕ್ಕೆ ಪಡೆದು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಮಂತ್ರವಾದಿಯ ಮೇಲೆ ಮಾನವ ಬಲಿ, ಮಾಟಗಾರಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.