ಮಂಗಳೂರಿನಲ್ಲಿ ಈ ಜೋಡಿಯ ಆರು ವರ್ಷಗಳ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ - ಆಕೆಯ ನಾಪತ್ತೆ ಬಯಲು ಮಾಡಿತು ಸಂಬಂಧ!
Wednesday, September 22, 2021
ಮಂಗಳೂರು; ಮಂಗಳೂರಿನ ಅಶೋಕನಗರದಲ್ಲಿ ನೆಲೆಸಿದ್ದ ಜೋಡಿ ಆರು ವರ್ಷಗಳ ಕಾಲ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಜೀವನ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿದೆ.
ಮಂಗಳೂರಿನ ಅಶೋಕನಗರದ 30 ವರ್ಷದ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಆಕೆಯ ಪತಿ ಎಂದು ಹೇಳಿಕೊಂಡ ವ್ಯಕ್ತಿ ಮಂಗಳೂರಿನ ಉರ್ವ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಈ ಪ್ರಕರಣ ಭೇದಿಸುವ ವೇಳೆ ಇವರದು ಗಂಡ ಹೆಂಡತಿ ಸಂಬಂಧವಲ್ಲ, ಆರು ವರ್ಷಗಳ ಕಾಲ ಮುಚ್ಚಿಟ್ಟ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಎಂದು ಬಯಲಾಗಿದೆ.
ಈ ಮಹಿಳೆ ಗದಗ ಮೂಲದವರಾಗಿದ್ದು ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಈಕೆಯ ಪತಿ ಘಟನೆಯೊಂದರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಈಕೆಗೆ ಗದಗದಲ್ಲಿ ಯುವಕನೊಬ್ಬನ ಜೊತೆಗೆ ಪ್ರೇಮಾಂಕುರವಾಗಿತ್ತು. ಇವರು ಮದುವೆಯಾಗದೆ ಜೀವನ ನಡೆಸಲು ನಿರ್ಧರಿಸಿ ಮಂಗಳೂರಿಗೆ ಬಂದಿದ್ದರು. ಹೊರಗಿನ ಸಮಾಜಕ್ಕೆ ಇವರು ಗಂಡ ಹೆಂಡತಿಯರಂತೆ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು.
ಆದರೆ ಯುವಕನ ಹಿಂಸೆ ಈಕೆಗೆ ಆತನಿಂದ ದೂರ ಹೋಗುವಂತೆ ಪ್ರೇರೆಪಿಸಿದೆ. ಇತ್ತೀಚೆಗೆ ಈ ಯುವಕ ತನ್ನ ಊರಾದ ಗದಗಕ್ಕೆ ಹೋಗಿದ್ದು ಈ ವೇಳೆ ಆತನಿಗೆ ಗೊತ್ತಾಗದಂತೆ ಈ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಊರಿಗೆ ಹೋಗಿದ್ದಾಳೆ. ಊರಿಂದ ಮಂಗಳೂರಿಗೆ ವಾಪಾಸಾದ ಯುವಕನಿಗೆ ಮನೆಯಲ್ಲಿ ಮಹಿಳೆ ಮತ್ತು ಮಕ್ಕಳು ಇಲ್ಲದೆ ಇರುವುದು ಆತಂಕವಾಗಿದ್ದು ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದೆ ದಿನದಲ್ಲಿ ಮಹಿಳೆಯನ್ನು ಮತ್ತು ಮಕ್ಕಳನ್ನು ಪತ್ತೆ ಹಚ್ಚಿದ್ದು ವಿಚಾರಣೆ ವೇಳೆ ಆತನೊಂದಿಗಿನ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಮತ್ತು ಆತನ ಹಿಂಸೆಯನ್ನು ಹೇಳಿದ್ದಾಳೆ. ಒಟ್ಟಿನಲ್ಲಿ ನಾಪತ್ತೆ ಪ್ರಕರಣ ತನಿಖೆ ಮಾಡಲು ಹೋದ ಪೊಲೀಸರಿಗೆ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಬೆಳಕಿಗೆ ಬಂದಿದೆ.