ಬಾಯ್ ಫ್ರೆಂಡ್ ಜೊತೆಗೆ ಗೋವಾಕ್ಕೆ ಜಾಲಿರೈಡ್ ಹೋಗಿದ್ದ ನಟಿ ಕಾರು ಅಪಘಾತವಾಗಿ ಮೃತ್ಯು
Wednesday, September 22, 2021
ಮುಂಬೈ: ಬಾಯ್ ಫ್ರೆಂಡ್ ನೊಂದಿಗೆ ಜಾಲಿ ರೈಡ್ ಹೊರಟಿದ್ದ ಮರಾಠಿ ಸಿನಿಮಾ ನಟಿ ಕಾರು ನದಿಗೆ ಬಿದ್ದು ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಮರಾಠಿ ಸಿನಿಮಾ ನಟಿ ಈಶ್ವರಿ ದೇಶ್‌ಪಾಂಡೆ ಕಳೆದ ವಾರ ತಮ್ಮ ಬಾಯ್‌ಫ್ರೆಂಡ್ ಶುಭಂ ದಾದ್ಗೆ ಜೊತೆಗೆ ಗೋವಾಕ್ಕೆ ಜಾಲಿ ರೈಡ್ ಹೋಗಿದ್ದರು. ಅಲ್ಲಿ ಅವರು ಕಾರಿನಲ್ಲಿಯೇ ವಿವಿಧ ಕಡೆಗಳಲ್ಲಿ ಪ್ರವಾಸ ಮಾಡುತ್ತಿದ್ದರು. ಈ ಸಂದರ್ಭ ಕಾರು ಆಕಸ್ಮಿಕವಾಗಿ ನಡೆದ ಅವಘಡದಲ್ಲಿ ಗೋವಾದ ಭಾಗಾ ನದಿಗೆ ಬಿದ್ದಿದೆ. ಪರಿಣಾಮ ಈಶ್ವರಿ ಹಾಗೂ ಶುಭಂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ನೀರಿಗೆ ಬಿದ್ದ ಸಂದರ್ಭ ಕಾರು ಸೆಂಟ್ರಲ್ ಲಾಕ್ ಆಗಿದ್ದ ಪರಿಣಾಮ ಇಬ್ಬರಿಗೂ ಕಾರಿನಿಂದ ಹೊರಬರಲಾಗದೆ ಅಲ್ಲಿಯೇ ಉಸಿರುಗಟ್ಟಿ ಅಸುನೀಗಿದ್ದಾರೆ. ಕಾರನ್ನು ನದಿಯಿಂದ ಮೇಲಕ್ಕೆತ್ತಲಾಗಿದ್ದು, ಇಬ್ಬರ ಮೃತ ದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
25 ವರ್ಷದ ನಟಿ ಈಶ್ವರಿ ದೇಶಪಾಂಡೆ ಮರಾಠಿ ಮತ್ತು ಹಿಂದಿ ಸಿನಿಮಾಗಳ ಚಿತ್ರೀಕರಣವನ್ನು ಕಳೆದ ವಾರವಷ್ಟೆ ಮುಗಿಸಿದ್ದರು. ಚಿತ್ರೀಕರಣ ಮುಗಿದ ಖುಷಿಯಲ್ಲಿ ಬಾಯ್‌ಫ್ರೆಂಡ್ ಜೊತೆಗೆ ಗೋವಾಕ್ಕೆ ಟೂರ್ ಹಾಕಿಕೊಂಡಿದ್ದರು. ಅಲ್ಲದೆ ಈಶ್ವರಿ ದೇಶಪಾಂಡೆ ತಮ್ಮ ಬಾಯ್‌ಫ್ರೆಂಡ್ ಶುಭಂರೊಂದಿಗೆ ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳುವವರಿದ್ದರು.
ಈಶ್ವರಿ ನಟಿಸಿರುವ ಎರಡು ಸಿನಿಮಾಗಳು ಬಿಡುಗಡೆ ಆಗುವುದರಲ್ಲಿದ್ದು, ಸಿನಿಮಾ ಬಿಡುಗಡೆಗೆ ಮುನ್ನವೇ ಈಶ್ವರಿ ಮೃತ್ಯುವಶವಾಗಿದ್ದಾರೆ. ಅವರ ಮೊದಲ ಮರಾಠಿ ಸಿನಿಮಾ 'ಪ್ರೇಮಾಚೆ ಸೈಡ್ ಎಫೆಕ್ಟ್ಸ್' ನಲ್ಲಿ ಈಶ್ವರಿ ಜೊತೆ ನಟಿಸಿರುವ ನಟ ಅಭಿಯನ್ ಬೇರ್ಡೆ ಸಾಮಾಜಿಕ ಜಾಲತಾಣದಲ್ಲಿ ನಟಿ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆದಿದ್ದು, ನಟಿಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.