ತಿನಿಸು, ಹಣದ ಆಸೆ ತೋರಿಸಿ ಭಿಕ್ಷುಕಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲು
Wednesday, September 22, 2021
ಧಾರವಾಡ: ತಿನಿಸಿನ, ಹಣದ ಆಮಿಷವೊಡ್ಡಿ ಕಮಲಾಪುರದ ಭಿಕ್ಷುಕಿ ಬಾಲಕಿಯ ಮೇಲೆ ಯುವಕನೋರ್ವನು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕೃತವಾಗಿ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದೆ.
14 ವರ್ಷದ ಬಾಲಕಿಯೋರ್ವಳು ಭಿಕ್ಷಾಟನೆಯಲ್ಲಿ ತೊಡಗಿರುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ಬಂದಿತ್ತು. ಅಲ್ಲದೆ ಬಾಲಕಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡುತ್ತಿದ್ದ ಯುವಕನೋರ್ವನನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಬಗ್ಗೆಯೂ ಮಕ್ಕಳ ಸಹಾಯವಾಣಿಗೆ ದೂರು ಬಂದಿತ್ತು.
ಮಾಹಿತಿ ತಿಳಿದ ತಕ್ಷಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬಾಲಕಿಯನ್ನು ನವನಗರದ ಸ್ನೇಹಾ ತೆರೆದ ತಂಗುದಾಣದಲ್ಲಿ ಪತ್ತೆ ಹಚ್ಚಿತ್ತು. ಬಳಿಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ನೇತೃತ್ವದಲ್ಲಿ ಬಾಲಕಿಯೊಂದಿಗೆ ಆಪ್ತ ಸಮಾಲೋಚನೆ ಕೈಗೊಳ್ಳಲಾಯಿತು. ಈ ಸಂದರ್ಭ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬಾಲಕಿ ಹೇಳಿದ್ದಾಳೆ.
ಬಾಲಕಿಯ ಹೇಳಿಕೆ ಅನ್ವಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಮಲವ್ವ ಬಲೂರು ಉಪನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಉಪನಗರ ಠಾಣೆ ಪೊಲೀಸರು, ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.