ತಾಯಿ ಮೊಟ್ಟೆ ದೋಸೆಗೆ ಹಣ ನೀಡಲಿಲ್ಲವೆಂದು ಆತ್ಮಹತ್ಯೆ ಮಾಡಿದ ಬಿಟೆಕ್ ವಿದ್ಯಾರ್ಥಿ!
Thursday, September 23, 2021
ವಿಜಯವಾಡ: ಇಂದು ಯುವ ಸಮುದಾಯ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿದ್ದು, ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡಿ ಜೀವನವನ್ನೇ ದುರಂತ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿಯ ಘಟನೆಯೊಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಲರಿವರಿಪಲ್ಲೆ ಪಟ್ಟಣದಲ್ಲಿ ನಡೆದಿದೆ. ಅದೇನೆಂದರೆ ಮೊಟ್ಟೆ ದೋಸೆ ತಿನ್ನಲು ತಾಯಿ ಹಣ ನೀಡಲಿಲ್ಲವೆಂದು ಬಿ.ಟೆಕ್ ವಿದ್ಯಾರ್ಥಿಯೋರ್ವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾಯಿ ಕಿರಣ್ (21) ಮೃತ ವಿದ್ಯಾರ್ಥಿ.
ಆರ್ಥಿಕ ತೊಂದರೆಯ ಮಧ್ಯೆಯೂ ಪಾಲಕರು ತುಂಬಾ ಕಷ್ಟಪಟ್ಟು ಮಗನನ್ನು ಓದಿಸುತ್ತಿದ್ದರು. ಮಂಗಳವಾರ ಬೆಳಗ್ಗೆ ಮೊಟ್ಟೆ ದೋಸೆ ತಿನ್ನಬೇಕೆಂದು ಬೇಡಿಕೆಯಿಟ್ಟು ತಾಯಿಯ ಬಳಿಕ ಮೃತ ಸಾಯಿ ಕಿರಣ್ ಹಣ ಕೇಳಿದ್ದಾನೆ. ಆದರೆ ತಾಯಿ 'ಮನೆಯಲ್ಲಿ ಅನ್ನವಿದೆ ಅದನ್ನೇ ತಿನ್ನು, ಸುಮ್ಮನೇ ಹಣ ವ್ಯರ್ಥ ಮಾಡಬೇಡ' ಎಂದು ಗದರಿದ್ದಾರೆ. ತಾಯಿಯ ಮಾತಿನಿಂದ ಮನನೊಂದು ಆತ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು, ಕೆರೆಯೊಂದಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಚಿತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.