ಸಂಡೇ ಸ್ಪೆಷಲ್ ನ ನಕಲಿ ವೈದ್ಯೆಯ ಬಣ್ಣ ಬಯಲು: ದೇಹದ ಯಾವ ಭಾಗದಲ್ಲಿ ನೋವಿದೆಯೋ ಅಲ್ಲಿಗೆ ಸೂಜಿ ಚುಚ್ಚುತ್ತಾಳಿವಳು!
Monday, September 27, 2021
ಯಾದಗಿರಿ: ಇಲ್ಲೊಬ್ಬಳು ನಕಲಿವೈದ್ಯೆ ಅಮಾಯಕ ಜನರ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾಳೆ ಎಂದು ಸಾರ್ವಜನಿಕರೇ ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿ ವೈರಲ್ ಮಾಡಿರುವ ಘಟನೆ ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್ ಬಳಿ ನಡೆದಿದೆ.
ಈ ನಕಲಿ ವೈದ್ಯೆ ಮನ ಬಂದಂತೆ ಇಂಜೆಕ್ಷನ್ ಚುಚ್ಚುತ್ತಿದ್ದು, ಈಕೆಯ ನಕಲಿಬಣ್ಣವನ್ನು ಸಾರ್ವಜನಿಕರೇ ಬಯಲು ಮಾಡಿದ್ದಾರೆ. ಆಕೆಯಲ್ಲಿ ಬರುವ ರೋಗಿಗಳಿಗೆ ಎಲ್ಲಿ ನೋವು ಇದೆಯೋ ಅದೇ ಭಾಗಕ್ಕೆ ಇಂಜೆಕ್ಷನ್ ಚುಚ್ಚುತ್ತಾಳೆ ಈ ವೈದ್ಯೆ. ಕಾಲಿಗೆ ನೋವಿದ್ದಲ್ಲಿ ಕಾಲಿಗೆ ಇಂಜೆಕ್ಷನ್ ಚುಚ್ಚಿದರೆ, ಕೈ ನೋವೆಂದರೆ ಕೈಗೆ, ಬೆನ್ನು ನೋವಾದಲ್ಲಿ ಬೆನ್ನಿಗೆ, ಬೆರಳಿಗೆ ನೋವಿದ್ದರೆ ಬೆರಳಿಗೆ ಸಹ ಇಂಜೆಕ್ಷನ್ ಚುಚ್ಚುತ್ತಾಳೆ. ಈ ನಕಲಿ ವೈದ್ಯೆಯ ಹೆಸರು ಅನಿತಾ. ಈಕೆ ತನ್ನಲ್ಲಿಗೆ ಬರುವ ಬಡಪಾಯಿ, ಮುಗ್ಧ ಜನರಿಂದ 250 ರಿಂದ 300 ರೂ.ವರೆಗೆ ಪಡೆದುಕೊಳ್ಳುತ್ತಾಳೆ. ಭಾನುವಾರ ಮಾತ್ರ ಈ ಸಂಡೇ ಸ್ಪೆಷಲ್ ನಕಲ ವೈದ್ಯೆಯ ಆಸ್ಪತ್ರೆ ಬಾಗಿಲು ತೆರೆದಿರುತ್ತದೆ.
ಸಣ್ಣ ಕೊಠಡಿಯೊಂದರಲ್ಲಿ ರೋಗಿಗಳಿಗೆ ಈ ನಕಲಿ ವೈದ್ಯೆ ಅನಿತಾ ಚಿಕಿತ್ಸೆ ನೀಡುತ್ತಾಳೆ. ಈಕೆಗೆ ಅಸಿಸ್ಟೆಂಟ್ ಕೂಡ ಓರ್ವನಿದ್ದು, ಬೇರೆ ಬೇರೆ ಜಿಲ್ಲೆಗಳಿಂದಲೂ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಈ ನಕಲಿ ವೈದ್ಯೆಯ ಬಗ್ಗೆ ಇಷ್ಟೆಲ್ಲಾ ವಿಚಾರಗಳು ಬಯಲಿಗೆ ಬಂದರೂ ಆರೋಗ್ಯ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಕಲಿ ವೈದ್ಯೆ ಅನಿತಾ ಆರೋಗ್ಯ ಇಲಾಖೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಪ್ರತಿ ಸಂಡೇ ಈಕೆ ತಾನೇ ವೈದ್ಯೆಯೆಂದು ಹೊಸಹಳ್ಳಿ ಕ್ರಾಸ್ ಬಳಿ ಬರುತ್ತಾಳೆ. ಹೀಗಾಗಿ ಆರೋಗ್ಯ ಇಲಾಖೆಯಿಂದ ಮಾತ್ರೆ ಮತ್ತು ಇಂಜೆಕ್ಷನ್ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾಳೆ ಎಂಬ ಆರೋಪಗಳು ಕೇಳಿ ಬಂದಿದೆ.
ಈಗಲಾದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ನಕಲಿ ವೈದ್ಯೆ ಅನಿತಾ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆಯೆಂದು ಸಾಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ್ ಹೇಳಿದ್ದಾರೆ.