Teachers demand for State Govt- ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಳೆಯ ನಿಶ್ಚಿತ ಪಿಂಚಣಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯ
2005-06ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ ಪ್ರಕಾರ ನೇಮಕವಾದ ಶಿಕ್ಷಕರಿಗೆ ಹಳೆಯ ನಿಶ್ಚಿತ ಪಿಂಚಣಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಶಿಕ್ಷಕರು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಶಿಕ್ಷಕರ ದಿನಾಚರಣೆ ಅಂಗವಾಗಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಹಾಗೂ ಜಿಲ್ಲೆಯ ವಿವಿಧ ಶಾಸಕರಿಗೆ ಶಿಕ್ಷಕರು ಮನವಿ ಅರ್ಪಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಈ ಒತ್ತಾಯ ಮಾಡಿದ್ದಾರೆ.
ರಾಜ್ಯದಲ್ಲಿ ಒಟ್ಟು 4725 ಶಿಕ್ಷಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರ ಪಿಂಚಣಿ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ ಹಾಗೂ ಕರ್ನಾಟಕ ಸರ್ಕಾರದ ನಡಾವಳಿ ಪ್ರಕಾರ ತಮ್ಮನ್ನು ಹಳೆ ನಿಶ್ಚಿತ ಪಿಂಚಣಿ ಯೋಜನೆಯ ಅಡಿ ಪರಿಗಣಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.
ತಮ್ಮ ಈ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು ಎಂದು ಸಚಿವರು ಮತ್ತು ಶಾಸಕರನ್ನು ಶಿಕ್ಷಕರು ಮನವಿ ಮಾಡಿದ್ದಾರೆ. ಹೊಸ ಪಿಂಚಣಿ ಯೋಜನೆ ಪ್ರಕಾರ ತಮ್ಮ ವೇತನದಲ್ಲಿ ಕಡಿತಗೊಂಡಿರುವ ಹಣವನ್ನು ಮರುಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕರು ಮನವಿ ಸಲ್ಲಿಸಿದ್ದಾರೆ.
ಸಚಿವ ಅಂಗಾರ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಶಾಸಕ ಯು.ಟಿ. ಖಾದರ್ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರಿಗೆ ಶಿಕ್ಷಕರು ಮನವಿ ಸಲ್ಲಿಸಿದ್ದಾರೆ.