ಭಾರತಕ್ಕೆ ಮರಳಿದ ಪತಿ ತನ್ನ ಸಂಪರ್ಕದಲ್ಲಿಲ್ಲ, ಆತನನ್ನು ಹುಡುಕಿಕೊಡಿರೆಂದು: ಭಾರತದ ವಿದೇಶಾಂಗ ಸಚಿವರಿಗೆ ಕೆನಡಾದಿಂದ ಟ್ವೀಟ್ ಮಾಡಿದ ಯುವತಿ
Monday, September 20, 2021
ಹೈದರಾಬಾದ್: ಕೆನಡಾದಲ್ಲಿ ನೆಲೆಸಿರುವ ಆಂಧ್ರಪ್ರದೇಶ ಮೂಲದ ಯುವತಿಯೋರ್ವರು ಪತಿಯನ್ನು ಹುಡುಕಿಕೊಡಿ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ರವರಿಗೆ ಟ್ವೀಟ್ ಮಾಡಿ ಸಹಾಯ ಕೋರಿದ್ದಾರೆ.
ದೀಪ್ತಿ ರೆಡ್ಡಿ ಎಂಬ ಯುವತಿ ಕೆನಡಾದ ಮೊಂಟ್ರಿಯಲ್ ನಗರದಲ್ಲಿ ಪತಿಯೊಂದಿಗೆ ನೆಲೆಸಿದ್ದರು. ಕಳೆದ ಮೂರು ತಿಂಗಳ ಹಿಂದೆ ಭಾರತಕ್ಕೆ ಬಂದಿರುವ ಅವರ ಪತಿ ಅನುಗುಲ ಚಂದ್ರಶೇಖರ್ ರೆಡ್ಡಿ ಮತ್ತೆ ತಮ್ಮ ಸಂಪರ್ಕದಲ್ಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಪತಿಯ ಮೇಲೆ ಕೋಪಗೊಂಡಿರುವ ದೀಪ್ತಿಗೆ ಯಾವ ಮಾಹಿತಿಯನ್ನು ನೀಡದೇ ಮೂರು ತಿಂಗಳ ಹಿಂದೆ ಪತಿ ಭಾರತಕ್ಕೆ ಮರಳಿದ್ದಾರೆ ಎಂದಿದ್ದಾರೆ.
"ಆಗಸ್ಟ್ 9ರಂದು ಪತಿ ಚಂದ್ರಶೇಖರ್ ರೆಡ್ಡಿಯ ಕೆನಡಾದ ಮೊಂಟ್ರಿಯಲ್ನಗರದಿಂದ ಹೊರಟಿದ್ದು, ಅಂದಿನಿಂದ ಅವರೊಂದಿಗಾಗಲಿ ಅವರ ಕುಟುಂಬದೊಂದಿಗಾಗಲಿ ಸಂಪರ್ಕ ಸಾಧ್ಯವಾಗುತ್ತಿಲ್ಲ. ಅವರ ಕುಟುಂಬಸ್ಥರು ನನ್ನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾರೆ. ತಾನು ಇದೀಗ ಎರಡು ತಿಂಗಳ ಗರ್ಭಿಣಿಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ನಾನು ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಆರೋಗ್ಯ ಸ್ಥಿತಿಯು ಸಹ ಸರಿಯಾಗಿಲ್ಲ" ಎಂದು ತಮ್ಮ ಸ್ಥಿತಿಯನ್ನು ವಿವರಿಸಿದ್ದಾರೆ.
ಅಲ್ಲದೆ "ನನ್ನ ಮೈದುನ ಎ. ಶ್ರೀನಿವಾಸ ರೆಡ್ಡಿ ಎಂಬಾತ ಹೈದರಾಬಾದ್ನ ಚೈತನ್ಯಪುರಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿದ್ದು, ಆತ ನನ್ನ ಅತ್ತೆ-ಮಾವ ಮತ್ತು ಪತಿಯನ್ನು ಬಚ್ಚಿಟ್ಟಿದ್ದಾರೆ. ಇದೀಗ ನನ್ನ ಪತಿ ಎಲ್ಲಿದ್ದಾರೆಂದು ನನಗೆ ಮಾಹಿತಿಯಿಲ್ಲ. ಅವರ ಆರೋಗ್ಯ ಪರಿಸ್ಥಿತಿಯೂ ಸರಿಯಿಲ್ಲ. ಹೀಗಾಗಿ ಅವರ ಚಿಂತೆ ನನ್ನನ್ನು ಕಾಡುತ್ತಿದೆ. ಹೇಗೋ ಪರಿಸ್ಥಿತಿ ನಿಭಾಯಿಸೋಣ ಎಂದರೆ ಮಾನಸಿಕ ಒತ್ತಡ ನನ್ನನ್ನು ಕೊಲ್ಲುತ್ತಿದೆ. ಆದ್ದರಿಂದ ನನ್ನ ಪತಿಯನ್ನು ಪತ್ತೆಹಚ್ಚಲು ಸಹಾಯ ಮಾಡಿ. ಪತಿಯ ಪಾಸ್ಪೋರ್ಟ್, ಮದುವೆ ಪ್ರಮಾಣ ಪತ್ರ ಹಾಗೂ ಅವರ ಇತ್ತೀಚಿಗಿನ ಪ್ರಯಾಣದ ಟಿಕೆಟ್ ಅನ್ನು ಲಗತ್ತಿಸಿದ್ದೇನೆ. ಅವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ನನ್ನ ಮೊಬೈಲ್ ಫೋನ್ ಸಂಖ್ಯೆಗೆ ಅಥವಾ ವಿಳಾಸಕ್ಕೆ ಮಾಹಿತಿ ನೀಡಿ" ಎಂದಿದ್ದಾರೆ.
ಅಲ್ಲದೆ, "ತಾನು ಕಳೆದ ಆಗಸ್ಟ್ 20ರಂದು ಪತಿಯ ಸುಳಿವಿರದ ಬಗ್ಗೆ ಭಾರತೀಯ ಹೈಕಮಿಷನ್‌ಗೆ ದೂರು ನೀಡಿದ್ದೆ. ಆದರೆ ಈವರೆಗೆ ದೂರಿನ ಬಗ್ಗೆ ಯಾವುದೇ ಪ್ರಗತಿಯೂ ದೊರಕಿಲ್ಲ. ಹೀಗಾಗಿ, ತನಗೆ ಸಹಾಯ ಮಾಡಿ" ಎಂದು ವಿದೇಶಾಂಗ ಸಚಿವ ಜೈಶಂಕರ್ ಬಳಿ ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ.
ದೀಪ್ತಿ ರೆಡ್ಡಿ ಮನವಿ ಮಾಡಿಕೊಂಡ ಬೆನ್ನಲ್ಲೇ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರಾಚಕೊಂಡ ಪೊಲೀಸರು ಆಕೆಯ ಪತಿಯನ್ನು ಹುಡುಕಾಟ ನಡೆಸುತ್ತಿದ್ದಾರೆ. ಈ ಪ್ರಗತಿಯ ಬಗ್ಗೆ ಅರಿತ ದೀಪ್ತಿ ರೆಡ್ಡಿ ಪತಿಯನ್ನು ಹುಡುಕಾಟ ನಡೆಸುತ್ತಿರುವ ಬಗ್ಗೆ ಸಂತೋಷಿತಳಾಗಿದ್ದೇನೆಂದು ಟ್ವೀಟ್ ಮಾಡಿದ್ದಾರೆ.