Udane Demolition accused arrested- ಗಣಪತಿ ಕಟ್ಟೆ ಧ್ವಂಸ ಪ್ರಕರಣ: ಆರೋಪಿ ಬಂಧನ.. 50 ರೂ. ಹರಿದ ನೋಟು ನೀಡಿದ ಸುಳಿವು
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಉದನೆ ಪರಶುರಾಮ್ ಮೈದಾನದ ಗಣಪತಿ ಕಟ್ಟೆಯನ್ನು ಹಾನಿಗೊಳಿಸಿದ ಪ್ರಕರಣದಲ್ಲಿ 50 ರೂ. ಹರಿದ ನೋಟು ನೀಡಿದ ಸುಳಿವು ಪೊಲೀಸರ ಯಶಸ್ವೀ ಕಾರ್ಯಾಚರಣೆಗೆ ಮಹತ್ವದ ಪಾತ್ರ ವಹಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, 50 ರೂ. ನೋಟಿನ ತುಣುಕು ಆರೋಪಿಯನ್ನು ಪತ್ತೆ ಹಚ್ಚಲು ಹೇಗೆ ಸಹಕಾರಿಯಾಯಿತು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
25ರ ವಯಸ್ಸಿನ ಬಿಹಾರದ ಬಾಗಲ್ಪುರ ಜಿಲ್ಲೆ ಸುದಾಮ್ ಗೋಪಾಲ್ಪುರ ತಾಲೂಕು ಗರ್ನಿಯ ನಿವಾಸಿ ರವೀಂದ್ರ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಉದನೆ ಗಣಪತಿ ಕಟ್ಟೆ ಧ್ವಂಸ ಮಾಡಿರುವ ಘಟನೆ ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಈ ಘಟನೆ ಭಾರೀ ಪ್ರಚಾರ ಗಿಟ್ಟಿಸಿತ್ತು. ಈಗ ಪೊಲೀಸರ ಕ್ಷಿಪ್ರ ತನಿಖೆಯಿಂದ ಆರೋಪಿಯ ಬಂಧನವಾಗಿದೆ. ಈ ಮೂಲಕ ಎಲ್ಲ ಅನುಮಾನಗಳೂ ಮಾಯವಾಗಿದೆ.
ಗಣಪತಿ ಕಟ್ಟೆ ಧ್ವಂಸ ಪ್ರಕರಣದ ಘಟನಾ ಸ್ಥಳದ ಮಹಜರು ನಡೆಸಿದಾಗ ಪೊಲೀಸರಿಗೆ 50 ರೂ. ಹರಿದ ನೋಟು ಮಹತ್ವದ ಸುಳಿವು ನೀಡಿತು. ಈ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಸ್ಥಳೀಯರೂ ಕೆಲ ಮಾಹಿತಿ ನೀಡಿದ್ದರು.
ಈ ಮಾಹಿತಿ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ಆ ವೇಳೆ ಆತನ ಕಿಸೆಯಲ್ಲಿ ಹರಿದ 50 ರೂ. ನೋಟಿನ ಇನ್ನೊಂದು ತುಣುಕು ಕೂಡ ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.