Vivek Alva - ಅನುಭವದಿಂದ ಸಂಪೂರ್ಣ ಜ್ಞಾನ ಪಡೆಯಲು ಸಾಧ್ಯ: ವಿವೇಕ್ ಆಳ್ವ
ಅನುಭವದಿಂದ ಸಂಪೂರ್ಣ ಜ್ಞಾನ ಪಡೆಯಲು ಸಾಧ್ಯ: ವಿವೇಕ್ ಆಳ್ವ
"ಕೇವಲ ಪಠ್ಯದಿಂದ ಸಂಪೂರ್ಣ ಜ್ಞಾನ ಪಡೆಯಲು ಸಾಧ್ಯವಿಲ್ಲ. ಬದಲಿಗೆ ಅನುಭವದಿಂದಲೇ ಯಾವುದೇ ವಿಷಯದ ಬಗ್ಗೆ ಪರಿಪೂರ್ಣ ಜ್ಞಾನ ಪಡೆಯಲು ಸಾಧ್ಯ" ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಪದವಿ ಸಮಾಜ ಕಾರ್ಯ ವಿಭಾಗದ ವತಿಯಿಂದ ನಡೆದ ಸ್ಫಟಿಕ ವೇದಿಕೆಯ ವಾರ್ಷಿಕ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, "ಎಲ್ಲಾ ಕೋರ್ಸ್ಗಳು ಸಮಾಜದ ಬಗ್ಗೆ ಸ್ಪಷ್ಟ ಪರಿಕಲ್ಪನೆ ನೀಡುವುದಿಲ್ಲ. ಆದರೆ ಸಮಾಜ ಕಾರ್ಯದಂತಹ ಕೋರ್ಸ್ಗಳಿಂದ ಮಾತ್ರ ವಿದ್ಯಾರ್ಥಿಗಳಿಗೆ ಸಮಾಜದ ಸ್ಥಿತಿಗತಿಗಳನ್ನು ಅರಿಯಲು ಸಾಧ್ಯ" ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸಮಾಜ ಕಾರ್ಯ ವಿಭಾಗದಿಂದ ನಡೆಯುವ ಕಾರ್ಯಕ್ರಮಗಳು ಕೇವಲ ವಿಭಾಗದ ವಿದ್ಯಾರ್ಥಿಗಳಿಗೆ ಸೀಮಿತವಾಗದೇ, ಬೇರೆ ವಿಭಾಗದ ವಿದ್ಯಾರ್ಥಿಗಳಿಗೂ ವಿಸ್ತರಿಸಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. ಬಳಿಕ, ಸಮಾಜ ಕಾರ್ಯ ವಿಭಾಗದ ಮುಂದಿನ ಯೋಜನೆಗಳು, ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಸ್ಫಟಿಕ ವೇದಿಕೆ ಸಂಯೋಜಕಿಯಾಗಿರುವ ಡಾ. ಸಪ್ನ ಆಳ್ವ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳನ್ನೂ ಸೇರಿದಂತೆ ಎಲ್ಲರೂ ಕಷ್ಟವನ್ನು ಎದುರಿಸಿದ್ದಾರೆ. ಈ ವೇಳೆ, ಎದುರಾದ ಸವಾಲುಗಳನ್ನೇ ಅವಕಾಶಗಳಾಗಿ ಬದಲಿಸಿ, ನಾವು ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ ಎಂದು ಹೇಳಿ, ಒಂದು ವರ್ಷದಲ್ಲಿ ವಿಭಾಗದ ವತಿಯಿಂದ ನಡೆದ ಕಾರ್ಯಕ್ರಮಗಳ ಪಟ್ಟಿಯನ್ನು ಮತ್ತು ವಾರ್ಷಿಕ ವರದಿಯನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ವಿಭಾಗದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪದವಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ, ಸ್ಫಟಿಕ ವೇದಿಕೆಯ ಅಧ್ಯಕ್ಷ ವಿಕಾಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಕ್ಷಿತಾ ಮತ್ತು ಬಳಗದವರು ಜಾಗೃತಿ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿ ವಿಕಾಸ್ ಸ್ವಾಗತಿಸಿ, ವಿದ್ಯಾರ್ಥಿ ಕೃಷ್ಣದಾಸ್ ವಂದಿಸಿದರು. ವಿದ್ಯಾರ್ಥಿನಿ ನಿಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು.