-->
ಮಹಿಳೆಯನ್ನು ಸಂಪೂರ್ಣ ಬೆತ್ತಲಾಗಿಸಿ ಕಬ್ಬಿನ ಕೋಲಿನಿಂದ ಥಳಿಸಿ, ಚಿತ್ರಹಿಂಸೆ: ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ

ಮಹಿಳೆಯನ್ನು ಸಂಪೂರ್ಣ ಬೆತ್ತಲಾಗಿಸಿ ಕಬ್ಬಿನ ಕೋಲಿನಿಂದ ಥಳಿಸಿ, ಚಿತ್ರಹಿಂಸೆ: ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ

ಯಾದಗಿರಿ: ಮಹಿಳೆಯೋರ್ವರನ್ನು ಸಂಪೂರ್ಣ ವಿವಸ್ತ್ರವಾಗಿಸಿ ನಾಲ್ವರ ತಂಡವೊಂದು ಕಬ್ಬಿನ ಕೋಲುಗಳಿಗಳಿಂದ ಹಲ್ಲೆ ನಡೆಸಿರುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಕೆಯ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಾಜ್ಯದ ಯಾದಗಿರಿ ಜಿಲ್ಲೆ ಸಮೀಪ ನಡೆದಿರುವುದಾಗಿ ಎನ್ನಲಾದ ಈ ಕೃತ್ಯ ನಿರ್ದಿಷ್ಟವಾಗಿ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದರ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.

ಉತ್ತರ ಪ್ರದೇಶ ಹಾಗೂ ಬಿಹಾರಗಳಂತಹ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಈ ರೀತಿಯ ಮೃಗೀಯ ವರ್ತನೆ ನಡೆಯುತ್ತಿರುವುದು ವರದಿಯಾಗುತ್ತದೆ. ಆದರೆ, ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಈ ರೀತಿಯ ಪೈಶಾಚಿಕ ಕೃತ್ಯ ನಡೆದಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. 

ಯಾದಗಿರಿ-ಶಹಾಪುರ ಮಾರ್ಗ ಮಧ್ಯೆ ಜಮೀನಿನಲ್ಲಿ ರಾತ್ರಿ ವೇಳೆ ನಡೆದಿರುವುದಾಗಿ ಎನ್ನಲಾಗುತ್ತಿರುವ ಈ ಕೃತ್ಯವನ್ನು ಹಲ್ಲೆಕೋರರ ಗುಂಪೇ ಮೊಬೈಲ್‌ನಲ್ಲಿ ಚಿತ್ರೀಕರಿಸಿದೆ ಎಂಬ ಶಂಕೆ ಮೂಡಿದೆ. ತೀವ್ರ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಮಹಿಳೆಯನ್ನು ಥಳಿಸಲು ಮುಂದಾಗಿರುವ ನಾಲ್ಕೈದು ದುಷ್ಕರ್ಮಿಗಳ ತಂಡ , ಆಕೆಯ ಮೈಮೇಲಿನ ಬಟ್ಟೆಗಳನ್ನು ತೆಗೆದು ಸಂಪೂರ್ಣ ಬೆತ್ತಲಾಗಿಸಿ ಥಳಿಸಿದೆ. ಅಲ್ಲದೆ ಲೈಂಗಿಕ ಹಿಂಸೆ ನೀಡಿರುವ ದೃಶ್ಯಗಳು ವೀಡಿಯೋದಲ್ಲಿ ದಾಖಲಾಗಿದೆ. 

ಹಲ್ಲೆ ನಡೆಸಿರುವ ದುಷ್ಕರ್ಮಿಯಲ್ಲೋರ್ವ‌  ಮೊಬೈಲ್‌ನಲ್ಲಿರುವ ಫೋಟೋವೊಂದನ್ನು ತೋರಿಸಿ, ‘ಇದು ನೀನೇ ಅಲ್ಲವೇ?’ ಎಂದು ಅವಾಚ್ಯವಾಗಿ ನಿಂದಿಸಿ ಥಳಿಸುತ್ತಾನೆ. ಆಗ ಆಕೆ ‘ನಾನಲ್ಲ, ನಂಗೇನೂ ಗೊತ್ತಿಲ್ಲ’ ಎಂದು ಬೇಡಿಕೊಂಡರೂ ಬಿಡದೆ ಎಲ್ಲರೂ ಸೇರಿ ಮನಸೋ ಇಚ್ಛೆ ಥಳಿಸುತ್ತಾರೆ. ಆಕೆಯನ್ನು ಸುತ್ತುವರಿದು ಥಳಿಸುತ್ತಾ, ಕೇಕೆ ಹಾಕುತ್ತ ಸಂಭ್ರಮ ಮೆರೆಯುತ್ತಿದ್ದ ಗುಂಪಿಗೆ ಕೈಮುಗಿದು ಕಣ್ಣೀರು ಹಾಕಿದ ಆ ಮಹಿಳೆ, ತನ್ನನ್ನು ಬಿಡಿ ಎಂದು ಗೋಗರೆಯುತ್ತಾಳಾದರೂ, ದುಷ್ಕರ್ಮಿಗಳ ತಂಡಕ್ಕೆ ಮನ ಕರಗುವುದಿಲ್ಲ.

ಅಲ್ಲದೆ ದುಷ್ಕರ್ಮಿಗಳಲ್ಲೋರ್ವನು ಹೊಡೆಯುವ ನೆಪದಲ್ಲಿ ಆಕೆಯ ಅಂಗಾಂಗಗಳನ್ನು ಮುಟ್ಟಿ ವಿಕೃತಿಯಿಂದ ವರ್ತಿಸುತ್ತಾನೆ. ಆಕೆ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೂ, ತಂಡ ಆಕೆಯನ್ನು ಅಟ್ಟಾಡಿಸಿ ಹೋಗಿ ಥಳಿಸುತ್ತದೆ. ಜೊತೆಗೆ ವಾಹನವೊಂದರ ಹೆಡ್‌ ಲೈಟ್‌ ಬೆಳಕು ಹಾಗೂ ಮೊಬೈಲ್‌ ಟಾಚ್‌ರ್ ಬೆಳಕನ್ನು ಅನ್ನು ಆಕೆಯ ಕಣ್ಣಿಗೆ  ಹಾಹಿಸಿ, ಹಿಂಸಿಸುವ ದೃಶ್ಯಗಳು ಕಂಡುಬರುತ್ತವೆ.

ಸಹಾಯಕ್ಕಾಗಿ ಮಹಿಳೆ ಮೊರೆಯಿಟ್ಟಾಗ ‘ಇಲ್ಲಿ ಯಾರೂ ಇಲ್ಲ, ಪೆಟ್ರೋಲ್‌ ಸುರಿದು ನಿನಗೆ ಬೆಂಕಿ ಹಚ್ಚುತ್ತೇವೆ’ ಎಂದು ಬೆದರಿಕೆಯ ಮಾತುಗಳು ಕೇಳಿ ಬರುತ್ತದೆ. ‘ಪೊಲೀಸ್‌ ಠಾಣೆಯಲ್ಲೇ ಈಕೆ ನನ್ನಿಂದ 13-14 ಸಾವಿರ ರೂ. ಪಡೆದಿದ್ದಾಳೆ’ ಎಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಥಳಿಸುತ್ತಾನೆ. ಯಾದಗಿರಿ ಸಮೀಪದ ಚಟ್ನಳ್ಳಿ ಹಾಗೂ ಶಹಾಪುರದ ಹಳಿಸಗರ ಎಂಬ ಊರುಗಳ ಹೆಸರನ್ನು ದುಷ್ಕರ್ಮಿಗಳು ಪದೇ ಪದೇ ಹೇಳುತ್ತಿರುತ್ತಾರೆ. ‘ಬೆಳಿಗ್ಗೆ ಆ ಹಣ ವಾಪಸ್‌ ನೀಡಬೇಕು’ ಎಂದು ತಾಕೀತು ಮಾಡಿ ಥಳಿಸುವ ದೃಶ್ಯವೂ ವೀಡಿಯೋದಲ್ಲಿದೆ. ಆದರೆ, ಈ ಬಗ್ಗೆ ಜಿಲ್ಲೆಯ ಯಾವುದೇ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿಲ್ಲ.

Ads on article

Advertise in articles 1

advertising articles 2

Advertise under the article