ಮಂಗಳೂರು: ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯ ದರೋಡೆಗೆ ಯತ್ನ: ಎದೆ ಜಲ್ಲೆನಿಸುತ್ತದೆ ದೃಶ್ಯ
Sunday, September 12, 2021
ಮಂಗಳೂರು: ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಾಡಹಗಲೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಮಹಿಳೆಯನ್ನು ದರೋಡೆಗೆ ಯತ್ನಿಸಿದ ಘಟನೆ ನಗರದ ಬೆಂದೂರ್ ವೆಲ್ ಸಮೀಪದ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಬೆಂದೂರ್ ವೆಲ್ ನಲ್ಲಿರುವ ಸೈಂಟ್ ಆ್ಯಗ್ನೆಸ್ ಕಾಲೇಜು ಮುಂಭಾಗ ಮಹಿಳೆ ಸಂಚಾರ ಮಾಡುತ್ತಿದ್ದರು. ಇನ್ನೇನು ಆಕೆ ಅಲ್ಲಿ ಬಸ್ ನಿಲ್ದಾಣದ ಪಕ್ಕ ಬರುತ್ತಿದ್ದಂತೆ ಏಕಾಏಕಿ ಕಾರು ಬಂದು ನಿಂತಿದೆ. ಕಾರಿನಿಂದ ಇಳಿದು ಬಂದ ದುಷ್ಕರ್ಮಿಯೋರ್ವನು ಹಿಂದಿನಿಂದ ಬಂದು ಮಹಿಳೆಯ ಬ್ಯಾಗ್ ಕಸಿಯಲು ಯತ್ನಿಸಿದ್ದಾನೆ.
ತಕ್ಷಣ ಎಚ್ಚೆತ್ತ ಮಹಿಳೆ ಬ್ಯಾಗ್ ಅನ್ನು ಗಟ್ಟಿ ಹಿಡಿದುಕೊಂಡು ಬೊಬ್ಬೆಯಿಟ್ಟಿದ್ದಾರೆ. ಈ ತಳ್ಳಾಟದ ನಡುವೆ ದುಷ್ಕರ್ಮಿಯು, ಮಹಿಳೆಯೂ ಕೆಳಗೆ ಬಿದ್ದಿದ್ದಾರೆ. ಆದರೂ ಆಕೆ ಬ್ಯಾಗ್ ಕಸಿಯಲು ಬಿಡದೆ ತನ್ನ ರಕ್ಷಣೆಗೆ ತಾನೇ ಮುಂದಾಗಿದ್ದಾರೆ.
ಅಲ್ಲದೆ ದರೋಡೆಗೆ ಯತ್ನಿಸಿದ ದುಷ್ಕರ್ಮಿಗೆ ಥಳಿಸಿ, ಪ್ರತಿರೋಧ ಒಡ್ಡಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದವರು ಎಚ್ಚೆತ್ತು ಅಲ್ಲಿಗೆ ಓಡಿ ಬರುವಂತೆ ಆತ ಅಲ್ಲಿಂದ ಕಾರು ಏರಿ ಪರಾರಿಯಾಗಿದ್ದಾನೆ. ಅದೇ ಸಮಯಕ್ಕೆ ಸಾರ್ವಜನಿಕರು ಕಾರಿನಲ್ಲಿದ್ದವರನ್ನು ಹಿಡಿಯಲು ಯತ್ನಿಸಿದ್ದರೂ, ಕಾರು ಅಲ್ಲಿಂದ ವೇಗವಾಗಿ ಚಲಿಸಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಮತ್ತು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾರಿನಲ್ಲಿ ನಾಲ್ವರಿದ್ದು, ದರೋಡೆಗೆ ಯತ್ನಿಸಿದ್ದ ವ್ಯಕ್ತಿಯಲ್ಲದೆ ಇನ್ನಿಬ್ಬರು ಕಾರಿನಿಂದ ಇಳಿದು, ಕಾರಿನ ಬಾಗಿಲು ತೆಗೆದು ನಿಂತು ಆತ ಕಾರು ಏರಲುನೆರವಾಗಿದ್ದಾರೆ. ಮತ್ತೋರ್ವ ಚಾಲಕನ ಸೀಟ್ ನಲ್ಲಿದ್ದ. ಅಲ್ಲದೆ ಕಾರಿನಲ್ಲಿ ನಂಬರ್ ಪ್ಲೇಟ್ ಇಲ್ಲ ಎಂಬ ಮಾತು ಕೂಡಾ ದೃಶ್ಯದಲ್ಲಿ ಕೇಳಿ ಬರುತ್ತಿದೆ. ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರೀಯಿಸಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಅವರು ಇದೊಂದು ಅಣಕು ಕಾರ್ಯಾಚರಣೆಯಾಗಿದೆ ಎಂದು ತಿಳಿಸಿದ್ದಾರೆ. ಘಟನೆ ಆದಾಗ ಜನರು ಯಾವ ರೀತಿ ಪ್ರತಿಕ್ರೀಯಿಸುತ್ತಾರೆ ಎಂಬುದನ್ನು ತಿಳಿಯಲು ಈ ಅಣಕು ಕಾರ್ಯಚರಣೆ ನಡೆಸಲಾಗಿತ್ತು. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಮಾಹಿತಿ ಇರಲಿಲ್ಲ ಎಂದು ಹೇಳಿದರು.