ಅಶ್ಲೀಲ ವೀಡಿಯೋ ಆರೋಪದ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಯೋಗ ಟಿಪ್ಸ್ ನೀಡಿದ ನಟಿ ಶಿಲ್ಪಾ ಶೆಟ್ಟಿ
Thursday, September 16, 2021
ಮುಂಬೈ: ಅಶ್ಲೀಲ ವೀಡಿಯೋ ಚಿತ್ರೀಕರಿಸಿರುವ ಆರೋಪದಡಿ ಜೈಲು ಪಾಲಾಗಿರುವ ಉದ್ಯಮಿ ರಾಜ್‌ಕುಂದ್ರಾ ಪತ್ನಿ ನಟಿ ಶಿಲ್ಪಾ ಶೆಟ್ಟಿ ವಿರುದ್ಧವೂ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ಈ ಆರೋಪಗಳಿಂದ ಆರಂಭದಲ್ಲಿ ಸಾಕಷ್ಟು ನೊಂದಿದ್ದ ಶಿಲ್ಪಾ ಶೆಟ್ಟಿ, ಇದೀಗ ಅದರಿಂದ ನಿಧಾನವಾಗಿ ಹೊರಬರುತ್ತಿದ್ದಾರೆ. ಅಲ್ಲದೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ರಿಯಾಲಿಟಿ ಷೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿರುವ ಅವರು, ಗಣೇಶನ ಹಬ್ಬದ ಸಂದರ್ಭ ಮನೆಗೆ ಗಣೇಶನನ್ನು ತಂದು ಕೂರಿಸಿ ಸಂಭ್ರಮದಿಂದ ಆಚರಿಸಿದ್ದರು. ಈ ಮೂಲಕ ತಮಗೊದಗಿರುವ ಕೆಟ್ಟ ಗಳಿಗೆಯಿಂದ ಹೊರಕ್ಕೆ ಬರಲು ಶಿಲ್ಪಾ ಶೆಟ್ಟಿ ಸಾಕಷ್ಟು ತಯಾರಿ ನಡೆಸಿದ್ದಾರೆ.
ಇದೀಗ ಶಿಲ್ಪಾ ಶೆಟ್ಟಿ ಏಕಾಗ್ರತೆ ಹೇಗೆ ಸಾಧಿಸಬೇಕೆಂಬ ವೀಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಅಭಿಮಾನಿಗಳನ್ನು ಅದೇ ರೀತಿ ಮಾಡುವಂತೆ ಹೇಳಿದ್ದಾರೆ. ನಿಯಮಿತವಾಗಿ ಯೋಗ ಮಾಡುತ್ತಿರುವುದರಿಂದ ಶಿಲ್ಪಾ ಶೆಟ್ಟಿ, ವಯಸ್ಸು 45 ದಾಟಿದ್ದರೂ ಇನ್ನೂ 20ರ ಯುವತಿಯಂತೆಯೇ ಕಾಣಿಸುತ್ತಾರೆ.
ಈ ವೀಡಿಯೋದಲ್ಲಿ ಶಿಲ್ಪಾ ಯೋಗದಿಂದ ಯಾವ ರೀತಿ ಏಕಾಗ್ರತೆ ಹೊಂದಬಹುದು, ಸಮಚಿತ್ತ ಹೊಂದಬಹುದು ಎಂಬುದರ ಬಗ್ಗೆ ಅಭಿಮಾನಿಗಳಿಗೆ ಟಿಪ್ಸ್ ನೀಡಿದ್ದಾರೆ. ಒಳ್ಳೆಯ ಮನಸ್ಸಿನಿಂದ ದಿನವನ್ನು ಆರಂಭಿಸುವುದಕ್ಕೆ ಯೋಗ ಸಹಕಾರಿಯಾಗುತ್ತದೆ. ಆದ್ದರಿಂದ ಯೋಗಕ್ಕಿಂತ ಉತ್ತಮವಾದದ್ದೂ ಯಾವುದೂ ಇಲ್ಲ. ಅದರಲ್ಲಿಯೂ ಏಕಪಾದ ವಸಿಷ್ಠಾಸನ ಯೋಗವು ಸಮತೋಲನ ಕಾಯ್ದುಕೊಳ್ಳಲು, ಏಕಾಗ್ರತೆ ಹೆಚ್ಚಿಸಲು ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಏಕಪಾದ ವಸಿಷ್ಠಾಸನದ ಕುರಿತು ಇನ್ನಷ್ಟು ವಿವರಣೆ ನೀಡಿರುವ ಶಿಲ್ಪಾ ಶೆಟ್ಟಿ, ಇದು ಮಣಿಕಟ್ಟನ್ನು ಬಲಪಡಿಸುತ್ತದೆ. ಜೊತೆಗೆ, ಭುಜಗಳು ಹಾಗೂ ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಅಲ್ಲದೆ ದಿನವನ್ನು ಉತ್ಸಾಹದಿಂದ ಆರಂಭಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.