
ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಸಾಬೀತು: ಅಪರಾಧಿಗೆ 10 ವರ್ಷ ಕಾರಾಗೃಹ ಶಿಕ್ಷೆ
Sunday, October 10, 2021
ಶಿವಮೊಗ್ಗ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿಗೆ ಶಿವಮೊಗ್ಗದ ಪೊಕ್ಸೊ ನ್ಯಾಯಾಲಯದ ನ್ಯಾಯಾಧೀಶ ದಯಾನಂದ್ 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ 2 ವರ್ಷಗಳ ಹಿಂದೆ ಅಪರಾಧಿ
ಮನ್ಸೂರ್ 16 ವರ್ಷದ ಅಪ್ರಾಪ್ತೆಯನ್ನು ಟಿವಿ ನೋಡುವ ನೆಪದಲ್ಲಿ ಮನಗೆ ಕರೆದಿದ್ದ. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿದ್ದ. ಅಲ್ಲದೆ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬಾಲಕಿಗೆ ಜೀವ ಬೆದರಿಕೆ ಒಡ್ಡಿ ಬೀಡಿಯಿಂದ ಆಕೆಯ ಬಲಗೈಯನ್ನು ಸುಟ್ಟಿದ್ದ.
ಬಾಲಕಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದು, ಈ ಕುರಿತು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಆರೋಪಿಯನ್ನು ಬಂಧಿಸಿದ ಅಂದಿನ ಪೊಲೀಸ್ ಇನ್ ಸ್ಪೆಕ್ಟರ್ ಅಭಯಪ್ರಕಾಶ್ ಸೋಮನಾಳ್ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಧೀಶ ದಯಾನಂದ್ ವಿಚಾರಣೆ ನಡೆಸಿ ಮನ್ಸೂರ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಸತೀಶ್ ವಾದ ಮಂಡಿಸಿದ್ದರು.