ಮಂಗಳೂರು: ಎರಡು ತಂಡಗಳ ನಡವೆ ಮಾರಾಮಾರಿ; ಬಂಧಿತ ಆರೋಪಿಗಳ ಸಂಖ್ಯೆ 13ಕ್ಕೆ ಏರಿಕೆ
Monday, November 1, 2021
ಮಂಗಳೂರು: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಗರದ ಬಳ್ಳಾಲ್ ಬಾಗ್ ನಲ್ಲಿ ಶನಿವಾರ ಮಧ್ಯರಾತ್ರಿ ಇತ್ತಂಡಗಳ ಮಧ್ಯೆ ನಡೆದಿರುವ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಠಾಣೆಯ ಪೊಲೀಸರು ಘಟನೆ ನಡೆದ ತಕ್ಷಣ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಭಾನುವಾರ ಮತ್ತೆ ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಧೀರಜ್ ಶೆಟ್ಟಿ, ರಕ್ಷಿತ್ ಕೆ., ರೋಹಿತ್ ಶೆಟ್ಟಿ, ಹರ್ಷಿತ್, ಕೀರ್ತಿರಾಜ್, ವಿವೇಕ್, ರಾಹುಲ್, ಅಫ್ತರ್, ಜಲೀಲ್, ತಿಲಕ್ ರಾಜ್, ನಿತಿನ್ ಶೆಟ್ಟಿ, ನವಾಲ್, ಸಿನಾನ್ ಬಂಧಿತ ಆರೋಪಿಗಳು. ಬಂಧಿತರಿಗೆ ನ.10ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಳಿದ ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ.
2017 ರಲ್ಲಿ ನಡೆದ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಖುಲಾಸೆಗೊಂಡವರು ಪಾರ್ಟಿ ಆಯೋಜಿಸಿದ್ದರು. ಇದು ವಿರೋಧಿ ಬಣಕ್ಕೆ ತಿಳಿದು ಮೂವರು ಬಳ್ಳಾಲ್ ಬಾಗ್ ಗೆ ಬಂದು ವಿನಾಕಾರಣ ತಗಾದೆ ತೆಗೆದಿದ್ದಾರೆ.
ಈ ವಿರೋಧಿ ಬಣದ ತಂಡವನ್ನು ಬಳ್ಳಾಲ್ ಬಾಗ್ ತಂಡ ಕುದ್ರೋಳಿವರೆಗೆ ಬೆನ್ನಟ್ಟಿದ್ದಾರೆ. ಆದರೆ ಕೆಲವೇ ಸಮಯದಲ್ಲಿ ಕುದ್ರೋಳಿಯಿಂದ ಮತ್ತಷ್ಟು ಯುವಕರ ದಂಡು ಬಳ್ಳಾಲ್ ಬಾಗ್ ಅಪಾರ್ಟ್ ಮೆಂಟ್ ಬಳಿ ಸೇರಿದೆ. ಈ ವೇಳೆ ಇತ್ತಂಡಗಳ ನಡುವೆ ವಾಗ್ವಾದ, ಘರ್ಷಣೆ ನಡೆದು ಕೈಕೈ ಮಿಲಾಯಿಸುವಷ್ಟರ ಮಟ್ಟಿಗೆ ಬಂದಿದೆ. ಈ ಸಂದರ್ಭ ಒಬ್ಬರಿಗೊಬ್ಬರು ವಿಕೆಟ್, ಪೈಪ್, ಕಲ್ಲು ಹಿಡಿದುಕೊಂಡು ಮಾರಾಮಾರಿ ನಡೆಸಿದ್ದಾರೆ. ಘಟನೆಯಲ್ಲಿ ಒಂದು ಕಾರು ಸೇರಿದಂತೆ ಆರು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.
ಅಲ್ಲದೆ ಘಟನೆಯ ವೇಳೆ ಮಾರಾಮಾರಿಯನ್ನು ತಡೆಯಲೆತ್ನಿಸಿದ ಮಹಿಳಾ ಪೊಲೀಸ್ ಅಧಿಕಾರಿಯೋರ್ವರನ್ನು ಆರೋಪಿಯೋರ್ವನು ತಳ್ಳಾಟ ನಡೆಸಿ ಅವರ ವಾಕಿಟಾಕಿಯನ್ನು ಕಿತ್ತು ನೆಲಕ್ಕೆಸಿದಿದ್ದಾನೆ. ಉಳಿದ ಕೆಲ ಆರೋಪಿಗಳು ಮಾರಾಮಾರಿಯನ್ನು ಬಿಡಿಸದಂತೆ ತಡೆದಿರುವ ಬಗ್ಗೆ ದೂರು ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಯನ್ನು ಘಟನೆ ನಡೆದ ಸಂದರ್ಭದಲ್ಲಿಯೇ ವಶಪಡಿಸಿಕೊಳ್ಳಲಾಗಿತ್ತು. ಉಳಿದ ಆರು ಆರೋಪಿಗಳನ್ನು ಇಂದು ಸಂಜೆ ಬಂಧಿಸಲಾಗಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಸು ಮೋಟೊ ಪ್ರಕರಣ ದಾಖಲಾಗಿದೆ.