
ಮಲಪ್ಪುರಂ: 15ರ ಬಾಲಕನಿಂದ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಯತ್ನ: ಆರೋಪಿ ಪೊಲೀಸ್ ವಶಕ್ಕೆ
Thursday, October 28, 2021
ಮಲಪ್ಪುರಂ: ಕಾಲೇಜು ವಿದ್ಯಾರ್ಥಿನಿಯನ್ನು ಅತ್ಯಾಚಾರಗೈಯಲು ಯತ್ನಿಸಿದ್ದಾನೆಂಬ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಕೇರಳದ ಕೊಂಡೊಟ್ಟಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ ಆರೋಪಿ ಬಾಲಕ 21 ವರ್ಷದ ನೆರೆಮನೆಯ ಕಾಲೇಜು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದ ದೂರು ಕೇಳಿ ಬಂದಿತ್ತು. ಪೊಲೀಸರು ಆರೋಪಿತ ಬಾಲಕನನ್ನು ಮಂಗಳವಾರ ವಶಪಡಿಸಿಕೊಂಡಿದ್ದು, ತನಿಖೆಯ ವೇಳೆ ಆತ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ಫೂಟೇಜ್ ಅನ್ನು ಪರಿಶೀಲನೆ ನಡೆಸಿರುವ ಪೊಲೀಸರು ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಂತ್ರಸ್ತೆ ನೀಡಿರುವ ಪೊಲೀಸ್ ದೂರಿನಲ್ಲಿ, ''ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಗೆ ಗಡ್ಡ ಮತ್ತು ಮೀಸೆ ಇರಲಿಲ್ಲ. ನೋಡಲು ದಪ್ಪವಿದ್ದ ಎಂದು ತಿಳಿಸಿದ್ದಳು. ಘಟನೆ ನಡೆದ ವೇಳೆ ಆರೋಪಿ ಬಾಲಕ ಓಡಿ ತಪ್ಪಿಸುವ ವೇಳೆ ಗಾಯಗಳಾಗಿತ್ತು. ಆದರೆ ಮನೆಯಲ್ಲಿ "ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದರಿಂದ ತಾನು ಓಡಿದ್ದೆ. ಆಗ ಬಿದ್ದು ಗಾಯಗಳಾಗಿದೆ'' ಎಂದು ಸುಳ್ಳು ಹೇಳಿದ್ದ ಎಂದು ಪೊಲೀಸ್ ತನಿಖೆಯ ವೇಳೆ ಬಯಲಾಗಿದೆ.
ಏನಿದು ಘಟನೆ?
ಮಂಗಳವಾರ ಮಧ್ಯಾಹ್ನ ಸಂತ್ರಸ್ತ ಯುವತಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕೊಂಡೊಟ್ಟಿಯ ಕೊಟ್ಟುಕ್ಕರದಲ್ಲಿ ಏಕಾಏಕಿ ಬಾಲಕ ಆಕೆಯ ಮೇಲೆ ದಾಳಿ ನಡೆಸಿ ಹಲ್ಲೆಗೈದಿದ್ದಾನೆ. ಬಳಿಕ ಆಕೆಯನ್ನು ಪಕ್ಕದಲ್ಲೇ ಇದ್ದ ತೋಟಕ್ಕೆ ಎಳೆದೊಯ್ದಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಸಂತ್ರಸ್ತೆಯ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಹೇಗೋ ತಪ್ಪಿಸಿಕೊಂಡ ಸಂತ್ರಸ್ತೆ, ಪಾಲಕರಲ್ಲಿ ಈ ವಿಚಾರ ತಿಳಿಸಿದ್ದಾಳೆ.
ತಕ್ಷಣ ಸಂತ್ರಸ್ತೆಯ ಪಾಲಕರು ಸ್ಥಳೀಯರ ನೆರವಿನಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಸಂತ್ರಸ್ತೆ ಕೋಝಿಕ್ಕೊಡ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ನಡೆದ ಸ್ಥಳದಲ್ಲಿನ ಸಮೀಪದಲ್ಲಿದ್ದ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲನೆ ನಡೆಸಿ ತನಿಖೆ ಮಾಡಿದಾಗ ಕೃತ್ಯ ಎಸಗಿರುವುದು ಸಂತ್ರಸ್ತೆಯ ನೆರೆಮನೆ ಬಾಲಕ ಎಂಬುದು ತಿಳಿದುಬಂದಿದೆ.