
ಬಿರಿಯಾನಿ ತಿನ್ನುವ ಆಸೆಗೆ ಬಲಿ ಬಿದ್ದು 2 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ
Saturday, October 23, 2021
ಬೆಂಗಳೂರು: ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಆಟೋಚಾಲಕನೋರ್ವನು ಬಿರಿಯಾನಿ ತಿನ್ನುವ ಆಸೆಯಿಂದ ತನ್ನಲ್ಲಿದ್ದ 2 ಲಕ್ಷ ರೂ. ಹಣವನ್ನೇ ಕಳೆದುಕೊಂಡ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಹನುಮಂತರಾಯ ಎಂಬ ಆಟೋಚಾಲಕನೇ ಹಣ ಕಳೆದುಕೊಂಡಾತ.
ಸಾಲದ ಬಾಧೆಯಿಂದ ತತ್ತರಿಸುತ್ತಿದ್ದ ಆಟೊ ಚಾಲಕ ಆ ಭಾರ ಇಳಿಸಿಕೊಳ್ಳಲು ಚಿನ್ನವನ್ನು ಅಡವಿಟ್ಟು 2 ಲಕ್ಷ ರೂ. ಸಾಲ ಪಡೆದಿದ್ದ. ಆ ಹಣವನ್ನು ಪಡೆದು ಮರಳಿ ಬರುತ್ತಿದ್ದ ಸಂದರ್ಭ ಬಿರಿಯಾನಿ ತಿನ್ನಲು ಹೋಗಿದ್ದ.
ಹಣವನ್ನು ಬೈಕ್ ಸೈಡ್ ಲಾಕರ್ನಲ್ಲಿಟ್ಟು ಬಾಮೈದನ ಜೊತೆಗೆ ಮಾರ್ಗಮಧ್ಯೆ ಬಿರಿಯಾನಿ ತಿನ್ನಲು ದ್ವಿಚಕ್ರವಾಹನ ನಿಲ್ಲಿಸಿದ್ದಾನೆ. ಇದೇ ಸಂದರ್ಭದಲ್ಲಿ ಕಳ್ಳರು ಆತನ ಬೈಕ್ ನಲ್ಲಿದ್ದ ಹಣದ ಗಂಟನ್ನೇ ಎಗರಿಸಿದ್ದಾರೆ. ಇವರು ಕಳವು ಕೃತ್ಯ ನಡೆಸಿ ಇನ್ನೊಂದು ಬೈಕ್ನಲ್ಲಿ ಪರಾರಿ ಆಗಿರುವುದು ಸಿಸಿಟಿವಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ.
ಇತ್ತೀಚೆಗೆ ನಡೆದಿರುವ ಈ ಕಳವು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆಗಾಗಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.