
2021ನೇ ವೈದ್ಯಕೀಯ ನೋಬೆಲ್ ಪ್ರಶಸ್ತಿಗೆ ಅಮೆರಿಕಾದ ಇಬ್ಬರು ವಿಜ್ಞಾನಿಗಳು ಭಾಜನ
Tuesday, October 5, 2021
ನ್ಯೂಯಾರ್ಕ್: 2021ನೇ ವೈದ್ಯಕೀಯ ಕ್ಷೇತ್ರದ ನೋಬೆಲ್ ಪ್ರಶಸ್ತಿಗೆ ಅಮೆರಿಕದ ಇಬ್ಬರು ವಿಜ್ಞಾನಿಗಳು ಭಾಜನರಾಗಿದ್ದಾರೆ.
ಡೇವಿಡ್ ಜೂಲಿಯಸ್ ಹಾಗೂ ಆಡೆಮ್ ಪ್ಯಾಟಪೋಶಿಯನ್ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಜ್ಞಾನಿಗಳು. ಈ ಪ್ರಶಸ್ತಿಯು ಬಂಗಾರದ ಪದಕ ಹಾಗೂ 10 ಮಿಲಿಯನ್ ಸ್ವೀಡಿಶ್ ಕ್ರೋನರ್ (1.1 ಮಿಲಿಯನ್ ಡಾಲರ್) ನಗದು ಮೊತ್ತವನ್ನು ಒಳಗೊಂಡಿದೆ.
ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ಡೇವಿಡ್ ಜೂಲಿಯಸ್ ಮತ್ತು ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್ ಸಂಶೋಧನೆಯ ಪ್ರಾಧ್ಯಾಪಕರಾಗಿರುವ ಆಡೆಮ್ ಪ್ಯಾಟಪೋಶಿಯನ್ ಈ ಪ್ರಶಸ್ತಿಯ ಮೊತ್ತವನ್ನು ಸಮನಾಗಿ ಹಂಚಿಕೊಳ್ಳಲಿದ್ದಾರೆ. "ಈ ಇಬ್ಬರೂ ವಿಜ್ಞಾನಿಗಳು ಸೇರಿ ನಡೆಸಿರುವ ಪ್ರಮುಖ ಸಂಶೋಧನೆಯು ಮನುಷ್ಯನ ನರಮಂಡಲವು ಬಿಸಿ, ತಂಪು ಮತ್ತು ಯಾಂತ್ರಿಕ ಪ್ರಚೋದನೆಗಳನ್ನು ಹೇಗೆ ಗ್ರಹಿಸುತ್ತದೆ ಎಂಬುವುದನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ.
ಈ ಸಂಶೋಧನೆ ಅನ್ವಯ ಈ ಇಬ್ಬರೂ ವಿಜ್ಞಾನಿಗಳು ನೋಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು ನೋಬೆಲ್ ಸಂಸ್ಥೆಯು ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿತ್ತು. ಇದೀಗ ಈ ಇಬ್ಬರೂ ತಮ್ಮ ಮನೆಗಳಲ್ಲೇ ಕುಳಿತು ಸಂಭ್ರಮಾಚರಿಸುತ್ತಿರುವ ಫೋಟೊಗಳನ್ನೂ ಮಾಧ್ಯಮಗಳು ಪ್ರಕಟಿಸಿವೆ.