
ಕೇಂದ್ರ ಸರಕಾರಿ ನೌಕರರಿಗೆ ದೀಪಾವಳಿ ಉಡುಗೊರೆ: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ
Friday, October 22, 2021
ನವದೆಹಲಿ: ಕೇಂದ್ರ ಸರಕಾರವು ತನ್ನ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಿಸುವ ಮೂಲಕ ದೀಪಾವಳಿ ಉಡುಗೊರೆಯನ್ನು ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರಕಿದೆ. ಈ ತುಟ್ಟಿ ಭತ್ತೆ ಹೆಚ್ಚಳ ಪ್ರಕ್ರಿಯೆ ಜುಲೈ 1ರಿಂದ ಅನ್ವಯ ಆಗಲಿದೆ. ಡಿಎ ಪ್ರಮಾಣ ಶೇ.28ರಿಂದ ಶೇ. 31ಕ್ಕೆ ಏರಿಕೆಯಾಗಲಿದೆ. ಈ ಮೂಲಕ ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (ಡಿಆರ್) ದೊರೆಯಲಿದೆ.
7ನೇ ವೇತನ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ಈ ಏರಿಕೆ ಮಾಡಲಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರದಿಂದ 47.14 ಲಕ್ಷ ಕೇಂದ್ರ ಸರಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಆರ್ಥಿಕ ಅನುಕೂಲ ದೊರೆಯಲಿದೆ. ಅದೇ ರೀತಿ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 9,488.70 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಅ.13ರಂದು ಚಾಲನೆ ನೀಡಿರುವ 100 ಲಕ್ಷ ಕೋಟಿ ರೂ. ಅನುದಾನ ಮೊತ್ತದ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲ್ಯಾನ್ಗೆ (ಎನ್ಎಂಪಿ) ಸಂಪುಟ ಒಪ್ಪಿಗೆ ನೀಡಿದೆ. ಸಾರಿಗೆ ವ್ಯವಸ್ಥೆಯಲ್ಲಿನ ಅಡಚಣೆಗಳನ್ನು ನಿವಾರಣೆ ಮಾಡಲು ವಿವಿಧ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಯೋಜನೆ ಇದಾಗಿದ್ದು, ಇದರಿಂದ ಸರಕು ಸಾಗಣೆ ತಡೆರಹಿತವಾಗಲಿದೆ. ಎನ್ಎಂಪಿ ಮೇಲೆ ಮೂರು ಹಂತದಲ್ಲಿ ನಿಗಾ ಇರಲಿದ್ದು, ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯ ಉನ್ನತಾಧಿಕಾರದ ಕಾರ್ಯದರ್ಶಿಗಳ ಗುಂಪು (ಇಜಿಒಎಸ್), ಮಲ್ಟಿಮಾಡಲ್ ನೆಟ್ವರ್ಕ್ ಪ್ಲ್ಯಾನಿಂಗ್ ಗುಂಪು (ಎನ್ಪಿಜಿ), ತಾಂತ್ರಿಕ ಬೆಂಬಲ ಘಟಕ (ಟಿಎಸ್ಯುು) ಈ ಹೊಣೆಯನ್ನು ನಿರ್ವಹಿಸಲಿವೆ.