
ಐ ಫೋನ್ ಗೆ ಬದಲಾಗಿ ಬಟ್ಟೆ ತೊಳೆಯುವ ಸೋಪು, 5 ರೂ. ನಾಣ್ಯ ಆರ್ಡರ್ ಬಂತು: ಶಾಕ್ ಆದ ಗ್ರಾಹಕ
Saturday, October 23, 2021
ತಿರುವನಂತಪುರ: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಯ ಜಾಲ ಸಕ್ರಿಯವಾಗಿದ್ದು, ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವ ಎಲ್ಲರೂ ಭಾರೀ ಜಾಗರೂಕರಾಗಿರಬೇಕಾದುದು ಅವಶ್ಯಕ. ಆನ್ಲೈನ್ ಖರೀದಿ ವೇಳೆಯೂ ಒಂದು ವಸ್ತುವನ್ನು ಆರ್ಡರ್ ಮಾಡಿದರೆ, ಮತ್ತೊಂದು ಬರುವಂತಹ ವಿಷಯಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅದೇ ರೀತಿಯ ಒಂದು ಘಟನೆ ಕೇರಳದಲ್ಲಿ ನಡೆದಿದೆ.
ಆದರೆ ಇದು ಕೊಂಚ ವಿಭಿನ್ನ ಪ್ರಕರಣವೂ ಹೌದು. ಅಲುವಾ ನಿವಾಸಿ ನೂರುಲ್ ಅಮೀನ್ ಎಂಬ ವ್ಯಕ್ತಿ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಆ್ಯಪಲ್ ಐ ಫೋನ್ ಅನ್ನು ಆರ್ಡರ್ ಮಾಡಿದ್ದರು. ಈ ಐ ಫೋನ್ ಗೆ 70,900 ರೂ. ಪಾವತಿ ಮಾಡಿದ್ದರು.
ಫೋನ್ ಬರುವ ದಿನ ಬಂದೇಬಿಟ್ಟಿತು. ಪಾರ್ಸೆಲ್ ಕೂಡ ಅವರ ಕೈಸೇರಿತು. ಆದರೆ ಪಾರ್ಸೆಲ್ ಬಿಡಿಸಿ ನೋಡಿದಾಗ ಅದರಲ್ಲಿ ಇದ್ದುದು ಪಾತ್ರೆ ತೊಳೆಯುವ ಸೋಪು ಹಾಗೂ 5 ರೂ. ನಾಣ್ಯ. ಇದರಿಂದ ಶಾಕ್ ಗೆ ಒಳಗಾಗಿರುವ ನೂರುಲ್, ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅವರು ತಮಗೆ ಐ ಫೋನ್ ಗೆ ಬದಲಾಗಿ ಹಸಿರು ಬಣ್ಣದ ವಿಮ್ ಡಿಶ್ ವಾಶ್ ಸೋಪ್ ಹಾಗೂ 5 ರೂ. ನಾಣ್ಯ ಬಂದಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ತಕ್ಷಣ ಅವರು ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿರುವ ಪೊಲೀಸರು ಅವರ ಹಣವನ್ನು ಅವರಿಗೆ ವಾಪಸ್ ಕೊಡಿಸಿದ್ದಾರೆ.
ಆದರೆ ಈ ಪ್ರಕರಣ ವಿಭಿನ್ನವಾಗಲು ಕಾರಣವೆಂದರೆ, ಮೊದಲಿಗೆ ಈ ರೀತಿ ಆಗಿರೋದು ಅಚಾನಕ್ ನಿಂದ ಆಗಿರುವ ಎಡವಟ್ಟು ಎಂದುಕೊಳ್ಳಲಾಗಿತ್ತು. ಆದರೆ ಪೊಲೀಸರು ತನಿಖೆ ಮಾಡುವ ವೇಳೆ ಇವರಿಗೆ ಬರಬೇಕಿದ್ದ ಐ ಫೋನ್ ಜಾರ್ಖಂಡ್‌ನಲ್ಲಿ ಇನ್ನಾರದ್ದೋ ಕೈಯಲ್ಲಿ ಇರುವುದು ಫೋನ್‌ನಲ್ಲಿರುವ ಐಎಂಇಐ ಸಂಖ್ಯೆಯಿಂದ ಪತ್ತೆಯಾಗಿದೆ. ಇದು ಹೇಗೆ ಸಾಧ್ಯ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.