-->
ಪ್ರೀತಿಸಿದಾತನಿಂದ ವಂಚನೆ, ಯುವತಿ ಆತ್ಮಹತ್ಯೆ ಪ್ರಕರಣ: ಎಎಸ್ಐ ಸೇರಿ 8 ಮಂದಿಯ ವಿರುದ್ಧ ಎಫ್ಐಆರ್ ದಾಖಲು

ಪ್ರೀತಿಸಿದಾತನಿಂದ ವಂಚನೆ, ಯುವತಿ ಆತ್ಮಹತ್ಯೆ ಪ್ರಕರಣ: ಎಎಸ್ಐ ಸೇರಿ 8 ಮಂದಿಯ ವಿರುದ್ಧ ಎಫ್ಐಆರ್ ದಾಖಲು

ಮೈಸೂರು: ಪ್ರೀತಿಸಿದಾತ ವಂಚನೆಗೈದಿರುವುದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್​​ಐ ಸೇರಿದಂತೆ 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. 

ಆತ್ಮಹತ್ಯೆಗೂ ಮುನ್ನ ತನಗೆ ನ್ಯಾಯ ದೊರಕಿಸಿಕೊಡುವಂತೆ ಯುವತಿ  ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಳು. ಆದರೆ ಪೊಲೀಸರು ಆಕೆಗೆ ಸರಿಯಾಗಿ ಸ್ಪಂದಿಸಿರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಠಾಣೆಯ ವೃತ್ತ ನಿರೀಕ್ಷಕರು ನೀಡಿರುವ ವರದಿ ಆಧಾರದ ಮೇಲೆ ಸುರೇಶ್, ಗುರುಮಲ್ಲು, ಲೋಕೇಶ್, ಜಡೆ ಮಲ್ಲಯ್ಯ, ಮಲ್ಲಿಕಾರ್ಜುನಯ್ಯ, ಗೌರಮ್ಮ, ರಾಜಮ್ಮ ಸೇರಿದಂತೆ ಎಎಸ್​​ಐ ಶಿವರಾಜು ವಿರುದ್ಧ ಎಫ್ಐಆರ್ ದಾಖಲಾಗಿದೆ‌.  

ನಂಜನಗೂಡು ತಾಲೂಕಿನ ಚೆನ್ನಪಟ್ಟಣ ಗ್ರಾಮದ ಯುವತಿ ಶೋಭಾ ಎಂಬಾಕೆಯನ್ನು, ಅದೇ ಗ್ರಾಮದ ಲೋಕೇಶ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದ. ವಿವಾಹವಾಗುವುದಾಗಿ ನಂಬಿಸಿದ್ದ ಲೋಕೇಶ್ ಶೋಭಾ ಜೊತೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದ ಎನ್ನಲಾಗಿದೆ. ಈ ಮಧ್ಯೆ ಸುರೇಶ್ ಎಂಬಾತ ಆಕೆಯ ಜೊತೆ ಮಾತನಾಡಿ ಮಧ್ಯ ಪ್ರವೇಶಿಸಿದ್ದಕ್ಕೆ ಲೋಕೇಶ್, ಯುವತಿಯಿಂದ ದೂರವಾಗಿದ್ದಾನೆ ಎಂದು ತಿಳಿದು ಬಂದಿದೆ. 

ಈ ನಡುವೆ ಲೋಕೇಶ್ ಮೋಸ ಮಾಡಿದ್ದಾನೆಂದು, ನ್ಯಾಯ ಒದಗಿಸುವಂತೆ ಮೃತ ಯುವತಿಯ ಮನೆಯವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.‌ ಆದರೆ ಠಾಣೆಯ ಎಎಸ್​​​ಐ ಶಿವರಾಜು ಕರ್ತವ್ಯ ಲೋಪ ಎಸಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಅಲ್ಲದೆ ಪೊಲೀಸ್ ದೂರು ದಾಖಲಾದ ಬಳಿಕ ಆರೋಪಿ ಲೋಕೇಶ್ ಯುವತಿ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದೀಗ ಯುವತಿ ಬರೆದಿರುವ ಡೆತ್​ನೋಟ್ ದೊರಕಿದ್ದು, ಲೋಕೇಶ್ ವಂಚನೆ ಹಾಗೂ ಸುರೇಶ್ ಹೆದರಿಸಿದ ವಿಚಾರವನ್ನು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ. ತನ್ನ ಸಾವಿಗೆ ಲೋಕೇಶ್ ಕಾರಣವೆಂದು ಡೆತ್‌ನೋಟ್‌ನಲ್ಲಿ ಬರೆದಿರುವ ಯುವತಿ, ಲೋಕೇಶ್‌ಗೆ ಜೈಲು ಶಿಕ್ಷೆ ನೀಡಬೇಕು, ಆತನನ್ನು ಗಲ್ಲಿಗೆ ಏರಿಸಬೇಕೆಂದು ಮನವಿ ಮಾಡಿದ್ದಾಳೆ.

Ads on article

Advertise in articles 1

advertising articles 2

Advertise under the article