
ಚಲಿಸುತ್ತಿದ್ದ ರೈಲಿನಲ್ಲಿಯೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ 8 ಜನ ದುಷ್ಕರ್ಮಿಗಳ ತಂಡ
Saturday, October 9, 2021
ಮುಂಬೈ: ಯುವತಿಯೋರ್ವಳ ಮೇಲೆ 8 ಮಂದಿ ದುಷ್ಕರ್ಮಿಗಳ ತಂಡ ಚಲಿಸುತ್ತಿರುವ ರೈಲಿನಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಉತ್ತರಪ್ರದೇಶದ ಲಕ್ನೋದಿಂದ ಮಹಾರಾಷ್ಟ್ರದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಈ ಪ್ರಕರಣ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಶುಕ್ರವಾರ ರಾತ್ರಿ, ಎಂಟುರಿದ್ದ ದರೋಡೆಕೋರರ ತಂಡವೊಂದು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್‌ಗೆ ಮಹಾರಾಷ್ಟ್ರದ ಇಗತ್ಪುರಿ ಪಟ್ಟಣದಲ್ಲಿ ಹತ್ತಿದ್ದಾರೆ. ಆ ಬಳಿಕ ಅವರು ರೈಲಿನಲ್ಲಿದ್ದ ಪ್ರಯಾಣಿಕರನ್ನು ದರೋಡೆ ಮಾಡಲು ಪ್ರಾರಂಭಿಸಿದ್ದಾರೆ. ಇದೇ ಸಂದರ್ಭ ತಂಡ 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ತಡೆಯಲು ಯತ್ನಿಸಿದ ಸುಮಾರು ಐದಾರು ಮಂದಿಗೆ ಹರಿತವಾದ ಆಯುಧಗಳಿಂದ ತಿವಿದು ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನ ಕಾಸರ ನಿಲ್ದಾಣದಲ್ಲಿ ರೈಲು ನಿಂತ ಸಂದರ್ಭ ಪ್ರಯಾಣಿಕರು ಸಹಾಯಕ್ಕಾಗಿ ಪೊಲೀಸರಿಗೆ ಕೂಗಿಕೊಂಡಿದ್ದಾರೆ. ತಕ್ಷಣ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಢಾಯಿಸಿ ಇಬ್ಬರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮುಂಬೈ ಜಿಆರ್‌ಪಿಯ ಪೊಲೀಸ್ ಆಯುಕ್ತ ಖೈಸರ್ ಖಾಲಿದ್ ಹೇಳಿದ್ದಾರೆ.
ದುಷ್ಕರ್ಮಿಗಳ ತಂಡ ರೈಲಿನಲ್ಲಿದ್ದ ಪ್ರಯಾಣಿಕರಿಂದ 96,390 ರೂ. ಮೌಲ್ಯದ ವಸ್ತುಗಳನ್ನು ದರೋಡೆಗೈದಿದೆ. ಈವರೆಗೆ 34,200 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.