ವೈದ್ಯನೇ ಪತ್ನಿಗೆ ಹೈಡೋಸ್ ಇಂಜೆಕ್ಷನ್ ಕೊಟ್ಟು ಹತ್ಯೆ ಮಾಡಿರುವ ಪ್ರಕರಣ: 9 ತಿಂಗಳ ಬಳಿಕ ಪತಿಯ ಕರಾಳ ಮುಖ ಬಯಲು
Sunday, October 24, 2021
ದಾವಣಗೆರೆ: ವೈದ್ಯನೋರ್ವ ತನ್ನ ಪತ್ನಿಗೆ ಹೈಡೋಸ್ ಇಂಜೆಕ್ಷನ್ ಕೊಟ್ಟು ಹತ್ಯೆ ಮಾಡಿರುವ ಪ್ರಕರಣವು ಒಂಬತ್ತು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಬೇಧಿಸುವಲ್ಲಿ ಹೊನ್ನಾಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಶಿಲ್ಪಾ ಹತ್ಯೆಯಾಗಿರುವ ನತದೃಷ್ಟೆ. ರಾಮೇಶ್ವರ ಗ್ರಾಮದ ಡಾ.ಚನ್ನೇಶಪ್ಪ ಹತ್ಯೆ ಮಾಡಿದ ಪತಿ.
ಡಾ.ಚೆನ್ನೇಶಪ್ಪ ನ್ಯಾಮತಿ ತಾಲೂಕಿನ ಬೆಳಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಕಳೆದ 18 ವರ್ಷಗಳ ಹಿಂದೆ ಡಾ. ಚನ್ನೇಶಪ್ಪ ಮತ್ತುಹಿರೇಕೆರೂರಿನ ಶಿಲ್ಪಾ ಜೊತೆ ವಿವಾಹವಾಗಿತ್ತು. ಇಬ್ಬರ ಸಂಸಾರವೂ ಆರಂಭದ ಮೂರು ವರ್ಷಗಳಲ್ಲಿ ಚೆನ್ನಾಗಿತ್ತು. ಇವರಿಗೆ ಓರ್ವ ಪುತ್ರಿ ಹಾಗೂ ಓರ್ವ ಪುತ್ರನೂ ಜನಿಸಿದ್ದರು.
ಮದುವೆ ಸಂದರ್ಭ ಶಿಲ್ಪಾ ಕುಟುಂಬ 700 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ, 7 ಲಕ್ಷ ರೂ. ನಗದನ್ನು ವರದಕ್ಷಿಣೆ ರೂಪದಲ್ಲಿ ಡಾ.ಚೆನ್ನೇಶಪ್ಪನಿಗೆ ನೀಡಲಾಗಿತ್ತು. ವಿಪರೀತ ಮದ್ಯಸೇವನೆ ಮಾಡುತ್ತಿದ್ದ ಡಾ.ಚೆನ್ನೇಶಪ್ಪ ಕ್ಯಾಸಿನೋ ಚಟ, ಜೂಜಾಟ, ವಾಮಾಚಾರದಂತ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದ. ಇಂತಹ ಅನಾಚರ ಚಟುವಟಿಕೆಗಳಿಗೆ ಹಣವನ್ನೆಲ್ಲಾ ಖರ್ಚು ಮಾಡುತ್ತಿದ್ದ.
ಇಷ್ಟಾದರೂ ಯಾವಾಗಲೂ ಚನ್ನೇಶಪ್ಪ ವರದಕ್ಷಿಣೆ ತರುವಂತೆ ಶಿಲ್ಪಾರಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಶಿಲ್ಪಾ ಹಾಗೂ ಅವರ ಪೋಷಕರು ಬೇಸತ್ತಿದ್ದರು. ಈ ಬಗ್ಗೆ ತವರು ಮನೆಯಲ್ಲಿ ಹೇಳಿಕೊಂಡಿದ್ದರು. ಈ ನಡುವೆ ಡಾ.ಚನ್ನೇಶಪ್ಪ ಕಳೆದ 9 ತಿಂಗಳ ಹಿಂದೆ ತನ್ನ ಚಾಣಾಕ್ಷತನ ಬಳಸಿ ಶಿಲ್ಪಾಳ ಕಥೆ ಮುಗಿಸಿದ್ದ. 2021ರ ಫೆಬ್ರವರಿ 11ರಂದು ಪತಿ ಶಿಲ್ಪಾಳಿಗೆ ಹೈಡೋಸ್ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಪೋಷಕರಿಗೆ ಕರೆ ಮಾಡಿ ಶಿಲ್ಪಾ ಸಾವನ್ನಪ್ಪಿರುವ ವಿಚಾರ ತಿಳಿಸಿದ್ದಾನೆ.
ಶಿಲ್ಪಾ ಪೋಷಕರು ಮನೆಗೆ ಬಂದು ಮೃತದೇಹವನ್ನು ಪರಿಶೀಲನೆ ನಡೆಸಿದಾಗ ಆಕೆಯ ಭುಜದ ಮೇಲೆ ಇಂಜೆಕ್ಷನ್ ಚುಚ್ಚಿರುವ ಗುರುತು ಮೂಡಿತ್ತು. ಈ ಬಗ್ಗೆ ವಿಚಾರಿಸಿದಾಗ ಚನ್ನೇಶಪ್ಪ, ಆಕೆಗೆ ಲೋ ಬಿಪಿ ಆಗಿದ್ದು, ತಾನೇ ಇಂಜೆಕ್ಷನ್ ಚುಚ್ಚಿದ್ದೇನೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದ.
ಆದೇ ಶಿಲ್ಪಾ ಬಾಯಿಂದ ರಕ್ತ ಮಿಶ್ರಿತ ನೊರೆ ಬರುತಿತ್ತು. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದರು. ಈ ಬಗ್ಗೆ ತಂದೆಯೆ ಹಿಂಸೆ ನೀಡಿರುವ ಬಗ್ಗೆ, ಇಂಜೆಕ್ಷನ್ ನೀಡಿರುವ ಬಗ್ಗೆ ಮಕ್ಕಳೇ ತಿಳಿಸಿದ್ದರು. ತನ್ನ ಮಗಳಿಗೆ ಯಾವುದೇ ಕಾಯಿಲೆ ಇರಲಿಲ್ಲವೆಂದೂ ಶಿಲ್ಪಾಳ ತಂದೆ ಚಂದ್ರಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ಡಾ.ಚೆನ್ನೇಶಪ್ಪ ವಾಮಾಚಾರಕ್ಕಾಗಿ ಪತ್ನಿಯನ್ನು ಇಂಜೆಕ್ಷನ್ ನೀಡಿ ಕೊಲೆಗೈದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಆತ ನಿಧಿಯ ಆಸೆಗೆ ಪತ್ನಿಯನ್ನು ಹತ್ಯೆ ಮಾಡಿರುವನೇ ಎಂಬ ಆಯಾಮದಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆತನ ಪುತ್ರಿಯೇ ತಾಯಿಯದ್ದು ಸಹಜ ಸಾವಲ್ಲ, ಕೊಲೆ ಎಂಬ ಆರೋಪ ಮಾಡಿದ್ದಾರೆ. ಆರೋಪಿ ಮೊದಲಿಗೆ ಇದನ್ನು ನಿರಾಕರಿಸಿದರೂ ಆಮೇಲೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿಯನ್ನೇ ಕೊಂದಿರುವ ವೈದ್ಯ ಕೊನೆಗೂ ಕಂಬಿ ಹಿಂದೆ ಬಂಧಿಯಾಗಿದ್ದಾನೆ.