
ತಮಿಳು ಸ್ಟಾರ್ ನಟನ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ: ಕಾರಣ ಇಲ್ಲಿದೆ ನೋಡಿ?
Wednesday, October 6, 2021
ಚೆನೈ: ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ರವರ ಮನೆ ಮುಂದೆಯೇ ಖಾಸಗಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕಾರ್ಯ ನಿಮಿತ್ತ ಅಜಿತ್ ರನ್ನು ಕಾಣಲು ಬಂದ ಮಹಿಳೆಗೆ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಫರ್ಜಾನಾ ಎಂಬ ಮಹಿಳೆಯು ತಮಿಳುನಾಡಿನ ತೇನಂಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ವರ್ಷ ನಟ ಅಜಿತ್ ಹಾಗೂ ಅವರ ಪತ್ನಿ ಶಾಲಿನಿ ಮಹಿಳೆ ಉದ್ಯೋಗ ಮಾಡುವ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಗೆ ನಟ ದಂಪತಿ ಬಂದಿರುವುದನ್ನು ಕಂಡು ಖುಷಿಯಿಂದ ಫರ್ಝಾನಾ ವೀಡಿಯೋ ಮಾಡಿದ್ದರು.
ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಆ ಮಹಿಳೆಯ ಗ್ರಹಚಾರ ಸರಿಯಿಲ್ಲವೋ ಏನೋ ಎಂಬಂತೆ ಈ ರೀತಿಯಾಗಿ ಆಸ್ಪತ್ರೆಗೆ ಬಂದವರ ವೀಡಿಯೋ ಮಾಡುವುದು ಆಸ್ಪತ್ರೆಗೆ ನಿಯಮ ಬಾಹಿರವಾಗಿತ್ತು. ಈ ಕಾರಣದಿಂದ ಫರ್ಜಾನಾರನ್ನು ಕೆಲಸದಿಂದ ವಜಾ ಮಾಡಲಾಗಿತ್ತು.
ಈ ಬಗ್ಗೆ ಫರ್ಜಾನಾ ಅವರು ನಟ ದಂಪತಿಯ ಕ್ಷಮೆಯನ್ನು ಕೋರಿ ಕಳೆದುಕೊಂಡ ತಮ್ಮ ಕೆಲಸವನ್ನು ಮತ್ತೆ ವಾಪಸ್ ಪಡೆದುಕೊಳ್ಳಲು ಹರಸಾಹಸ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಇದೇ ಹಿನ್ನೆಲೆಯಲ್ಲಿ ಮಹಿಳೆ ಅಜಿತ್ ಅವರನ್ನು ಭೇಟಿಯಾಗಬೇಕೆಂದು ಅವರ ಮನೆಯತ್ತ ಹೋಗಿದ್ದರು. ಆದರೆ ಅಲ್ಲಿಯೂ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದರಿಂದ ಮನನೊಂದ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಆದರೆ ತಕ್ಷಣ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಬಂದು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಬಳಿಕ ಆಕೆಯನ್ನು ಸಮಾಧಾನ ಮಾಡಿ ಕಳುಹಿಸಿಕೊಡಲಾಗಿದೆ. ಮಹಿಳೆಯ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.