
ನೀರು ಕೇಳುವ ನೆಪದಿಂದ ಮನೆಯೊಡತಿಯ ಕತ್ತಿಗೆ ಕೈಹಾಕಿ ಸರ ಕದಿಯಲು ಯತ್ನಿಸಿದಾತ ಪೊಲೀಸ್ ಅತಿಥಿಯಾದ!
Wednesday, October 13, 2021
ಬೆಂಗಳೂರು: ಬಾಯಾರಿಕೆಯಾಗುತ್ತದೆ ಎಂದು ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿದಾತ ಮನೆಯೊಡತಿಯ ಸರ ಕದಿಯಲು ಯತ್ನಿಸಿ ಪೊಲೀಸ್ ಅತಿಥಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಟಿ.ಬೇಗೂರಿನಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಸಿದ್ಧಾಪುರ ಮೂಲದ ಮಾರುತಿ ಎಂಬಾತನೇ ಕೃತ್ಯ ಎಸಗಿದಾತ. ಸ್ಥಳೀಯರೇ ಈತನಿಗೆ ಸರಿಯಾಗಿ ಒದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮದ್ಯಪಾನ ಮಾಡಿದ್ದ ಮಾರುತಿ ಹನುಮಕ್ಕ ಎಂಬವರು ವಾಸಿಸುತ್ತಿದ್ದ ಬಾಡಿಗೆಯತ್ತ ಬಂದು ನೀರು ಕೇಳಿದ್ದಾನೆ. ಆಕೆ ನೀರು ತರಲೆಂದು ಒಳ ಹೋದ ತಕ್ಷಣ ಮಾರುತಿ ಮನೆಯೊಳಗೆ ನುಗ್ಗಿ ಆಕೆಯ ಸರ ಕದಿಯಲು ಯತ್ನಿಸಿದ್ದಾನೆ. ಏಕಾಏಕಿ ಮಾರುತಿ ಒಳ ಬಂದು ಸರ ಕದಿಯಲು ಯತ್ನಿಸುತ್ತಿರುವುದನ್ನು ಕಂಡು ಗಾಬರಿಯಾದ ಹನುಮಕ್ಕ ಬೊಬ್ಬೆ ಹಾಕಿದ್ದಾರೆ.
ತಕ್ಷಣ ಅಲ್ಲಿ ಜನ ಜಮಾಯಿಸಿದ್ದು ಸ್ಥಳೀಯರೇ ಆರೋಪಿ ಮಾರುತಿಯನ್ನು ಹಿಡಿದು ಸರಿಯಾಗಿ ಹೊಡೆದು ಮರಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.