ಬೆಂಗಳೂರು: ವಂಚನೆ, ಲೈಂಗಿಕ ದೌರ್ಜನ್ಯ ಎಸಗಿ ಯುವತಿಯ ಪಾಲಿಗೆ 'ಖಳ'ನಾದ ನಟನ ಬಂಧನ
Wednesday, October 27, 2021
ಬೆಂಗಳೂರು: ಕೆಲಸ ದೊರಕಿಸಿ ಕೊಡುವುದಾಗಿ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಸ್ಯಾಂಡಲ್ವುಡ್ ಖಳನಟನೋರ್ವನನ್ನು ಸುಬ್ರಮಣ್ಯನಗರ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ಡಾರ್ಕ್, ಸಸ್ಪೆನ್ಸ್, ಕಿಲಾಡಿ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಶೇಷಗಿರಿ ಬಸವರಾಜ್ ಎಂಬ ನಟನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಬ್ಯಾಂಕ್ ಉದ್ಯೊಗಿಯಾಗಿದ್ದ ಶೇಷಗಿರಿ ಬಸವರಾಜ್ ಇತ್ತೀಚೆಗೆ ನೌಕರಿ ತೊರೆದು ಸಿನಿಮಾದಲ್ಲಿ ನಟಿಸಲು ತೊಡಗಿದ್ದ. ಬಹುತೇಕ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ಈತ ಇತ್ತೀಚೆಗೆ ಯುವತಿಯೋರ್ವಳಿಗೆ ಬ್ಯಾಂಕ್ನಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದಿದ್ದ.
ಹಣ ಪಡೆದು ಹಲವು ದಿನಗಳಾದರೂ ಕೆಲಸವನ್ನೂ ಕೊಡಿಸದೆ, ಹಣವನ್ನೂ ನೀಡದೆ ಸತಾಯಿಸುತ್ತಿದ್ದ. ಹಣ ನೀಡುವಂತೆ ಒತ್ತಾಯಿಸಿದ್ದಾಗ ಶೇಷಗಿರಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ನಟನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.