
ಬಿಗ್ ರಿಲೀಫ್: ಕೊನೆಗೂ ಸಿಕ್ತು ಶಾರುಖ್ 'ಪುತ್ರ'ನಿಗೆ ಜಾಮೀನು!
Thursday, October 28, 2021
ಮುಂಬೈ: ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಆರ್ಯನ್ ಆರೋಪದಲ್ಲಿ ಎನ್ಸಿಬಿ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಮೂರು ವಾರಗಳ ಬಳಿಕ ಬಿಗ್ ರಿಲೀಫ್ ದೊರಕುವ ಮೂಲಕ ಕೊನೆಗೂ ನ್ಯಾಯಾಲಯ ಜಾಮೀನು ನೀಡಿದೆ.
ಇಂದು ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ಆರ್ಯನ್ ಖಾನ್ ಗೆ ಜಾಮೀನು ನೀಡಿದೆ. ಕಳೆದ ಮೂರು ವಾರಗಳಿಂದ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದು ಆದರೆ, ಮುಂಬೈನ ವಿಶೇಷ ಎನ್ಡಿಪಿಎಸ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬಳಿಕ ಆರ್ಯನ್ ಖಾನ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಕೊನೆಗೂ ಆರ್ಯನ್ ಖಾನ್ ಗೆ ಇಂದು ಜಾಮೀನು ದೊರೆತಿದೆ.
ವಾಣಿಜ್ಯ ನಗರಿ ಮುಂಬೈನ ಐಷಾರಾಮಿ ಕಾರ್ಡಿಲಿಯಾ ಕ್ರೂಸ್ ಎಂಪ್ರೆಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಅಕ್ಟೋಬರ್ 2ರಂದು ರಾತ್ರಿ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ತಂಡ ದಾಳಿ ನಡೆಸಿತ್ತು. ಈ ಸಂದರ್ಭ ಕೊಕೇನ್, ಹಶೀಶ್ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಮಾದಕವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಆರ್ಯನ್ ಖಾನ್ ಸೇರಿದಂತೆ ಒಟ್ಟು 8 ಮಂದಿಯನ್ನು ಎನ್ಸಿಬಿ ವಶಕ್ಕೆ ಪಡೆದು, ವಿಚಾರಣೆಯ ಬಳಿಕ ಬಂಧಿಸಿತ್ತು. 23 ವರ್ಷ ವಯಸ್ಸಿನ ಆರ್ಯನ್ ಖಾನ್ ಅ. 3ರಿಂದ ನ್ಯಾಯಾಂಗ ಬಂಧನಕ್ಕೊಳಗಾಗಿ, ಅ. 8ರಿಂದ ಮುಂಬೈನ ಅರ್ಥರ್ ರೋಡ್ ನ ಜೈಲಿನಲ್ಲಿದ್ದರು. ಅಂದಿನಿಂದ ಎರಡು ಬಾರಿ ಆರ್ಯನ್ ಖಾನ್ ಗೆ ಜಾಮೀನು ನೀಡಲು ನ್ಯಾಯಾಲಯ ಒಪ್ಪಿರಲಿಲ್ಲ. ಕೊನೆಗೂ 25 ದಿನಗಳ ಬಳಿಕ ಆರ್ಯನ್ಗೆ ಇಂದು ಜಾಮೀನು ದೊರೆತಿದೆ.
ಪ್ರತೀ ವಿಚಾರಣೆಯ ವೇಳೆ ಆರ್ಯನ್ ಖಾನ್ ಪರ ವಾದಿಸಿದ ನ್ಯಾಯವಾದಿ ದಾಳಿಯ ವೇಳೆ ಆತನ ಬಳಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಪದೇಪದೆ ವಾದಿಸುತ್ತಿದ್ದರು. ಆದರೆ, ರೇವ್ ಪಾರ್ಟಿಯಲ್ಲಿ ಆರ್ಯನ್ ಪಾತ್ರವಿದೆ. ಆತ ಅಕ್ರಮ ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ದ ಎಂಬುದನ್ನು ಆತನ ವಾಟ್ಸ್ಆ್ಯಪ್ ಚಾಟ್ ಬಹಿರಂಗಪಡಿಸಿದೆ ಎಂದು ಎನ್ಸಿಬಿ ಪರ ವಕೀಲರು ವಾದಿಸುತ್ತಿದ್ದರು.