
ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ: ಅನ್ಯಕೋಮಿನ ಯುವಕನೊಂದಿಗೆ ಸುತ್ತಾಡುತ್ತಿದ್ದ ಯುವತಿಗೆ ಥಳಿತ
Wednesday, October 20, 2021
ಬೆಳಗಾವಿ: ಕುಂದಾನಗರಿಯಲ್ಲಿ 15 ದಿನಗಳ ಅಂತರದಲ್ಲಿ ನಡೆದ ಮೂರು ನೈತಿಕ ಪೊಲೀಸಗಿರಿ ಪ್ರಕರಣಗಳು ನಡೆದಿದ್ದು, ಇದು ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಅ.14 ರಂದು ಅನ್ಯಕೋಮಿನ ಯುವತಿಯ ಜೊತೆ ಯುವಕನೋರ್ವ ಇದ್ದುದಕ್ಕೆ ತಂಡವೊಂದು ಹಲ್ಲೆ ನಡೆಸಿರುವ ಮತ್ತೊಂದು ಕೃತ್ಯವೊಂದು ಬೆಳಕಿಗೆ ಬಂದಿದೆ.
ರಾಯಭಾಗ ಮೂಲದ ಯುವಕ, ಸಂಕೇಶ್ವರ ಮೂಲದ ಯುವತಿ ಅ.14ರಂದು ಬೆಳಗಾವಿಗೆ ಆಗಮಿಸಿದ್ದು, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಆಟೋ ಚಾಲಕನ ಬಳಿ ಯಾವುದಾದರೂ ಉದ್ಯಾನಕ್ಕೆ ಕರೆದುಕೊಂಡು ಹೋಗುವಂತೆ ಕೇಳಿದ್ದಾರೆ. ಆತ ಅವರನ್ನು ಉದ್ಯಾನವನಕ್ಕೆ ಕರೆದೊಯ್ಯುವೆನೆಂದು ಹೇಳಿ ಅಮನ್ ನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದುದ್ದಾನೆ. ಅಲ್ಲಿಗೆ ಬೇರೆಯವರನ್ನು ಕರೆಸಿಕೊಂಡು ಅನ್ಯಕೋಮಿನ ಯುವಕನ ಜೊತೆಗೆ ಓಡಾಡಿದ್ದಕ್ಕೆ ಯುವತಿಯನ್ನು ಥಳಿಸಿದ್ದಾರೆ.
ಬಳಿಕ ಅವರಿಬ್ಬರ ಬಳಿಯಿದ್ದ 20 ಸಾವಿರ ಮೌಲ್ಯದ ಮೊಬೈಲ್, 50 ಸಾವಿರ ನಗದು ಹಣ ಮತ್ತು ಆಧಾರ್ ಕಾರ್ಡ್, ಎಟಿಎಂ ಕಾರ್ಡ್ ಕಸಿದುಕೊಂಡು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ತಕ್ಷಣವೇ ಹಲ್ಲೆಗೊಳಗಾದ ಯುವತಿ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
20 ಜನರ ಗುಂಪೊಂದು ರಾಡ್, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ಸಂಬಂಧ ಬೆಳಗಾವಿ ನಗರದ ಅಲಾರವಾಡ್ ಆಟೋ ಚಾಲಕ ದಾವತ್ ಕತೀಬ್, ಅಯುಬ್, ಯುಸೂಫ್ ಪಠಾಣ ಎಂಬವರನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. ಪ್ರಕರಣ ಸಂಬಂಧ ಮಾರ್ಕೆಟ್ ಎಸಿಪಿ, ಮಾಳಮಾರುತಿ ಸಿಪಿಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.