ಕಪ್ಪುಬಣ್ಣಕ್ಕೆ ತಿರುಗಿದ ಅರುಣಾಚಲದ ಕಮೆಂಗ್ ನದಿ: ಸತ್ತು ತೇಲುತ್ತಿರುವ ಸಾವಿರಾರು ಮೀನುಗಳು!
Sunday, October 31, 2021
ಇಟಾನಗರ: ಅರುಣಾಚಲ ಪ್ರದೇಶ ರಾಜ್ಯದ ಪೂರ್ವ ಕಮೆಂಗ್ ಜಿಲ್ಲೆಯ ಸೆಪ್ಪಾ ಹಳ್ಳಿಯಲ್ಲಿದ್ದ ಕಮೆಂಗ್ ನದಿಯ ನೀರು ಏಕಾಏಕಿ ಕಪ್ಪು ಬಣ್ಣಕ್ಕೆ ತಿರುಗಿದೆ. ಪರಿಣಾಮ ಈ ನದಿಯಲ್ಲಿದ್ದ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ನೀರಿನಲ್ಲಿ ಕರಗುವ ವಸ್ತುಗಳ (ಟಿಡಿಎಸ್) ವಿಷಕಾರಿ ಅಂಶಗಳಿಂದ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ನೀರು ವಿಷಕಾರಿಯಾಗಲು ನದಿಯ ಮೇಲ್ಭಾಗದಲ್ಲಿ ಚೀನಾ ನಡೆಸುತ್ತಿರುವ ನಿರ್ಮಾಣ ಕಾಮಗಾರಿಯೇ ಕಾರಣವೆಂದು ಸೆಪ್ಪಾ ಗ್ರಾಮಸ್ಥರು ದೂರಿದ್ದಾರೆ.
ಈ ನದಿಯಲ್ಲಿ ಪ್ರತಿ ಲೀಟರ್ ನೀರಿನಲ್ಲಿ 6,800 ಎಂಜಿಯಷ್ಟು ಟಿಡಿಎಸ್ ಇರುವುದು ದೃಢಪಟ್ಟಿದೆ. ಸಾಮಾನ್ಯವಾಗಿ ಇದು 300ರಿಂದ 1,200 ಎಂಜಿ ಇರಬೇಕಿತ್ತು. ಟಿಡಿಎಸ್ ಪ್ರಮಾಣ ಇದೇ ರೀತಿ ಏರಿಕೆಯಾದಲ್ಲಿ ಮೀನುಗಳ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಹಾಗೆಯೇ ನದಿಯ ಕೆಳಪಾತ್ರಕ್ಕೂ ವಿಸ್ತರಿಸುತ್ತದೆ ಎಂದು ಪೂರ್ವ ಕಮೆಂಗ್ ಜಿಲ್ಲಾ ಮೀನುಗಾರಿಕಾ ಇಲಾಖೆ ಹೇಳಿದೆ.
ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ನೀರಿನಲ್ಲಿ ಟಿಡಿಎಸ್ ಪ್ರಮಾಣ ಹೆಚ್ಚಿರುವುದೇ ನೀರು ಕಪ್ಪಾಗಲು, ಮೀನುಗಳು ಅಸುನೀಗಲು ಕಾರಣ. ಇದು ನೀರಿನಲ್ಲಿ ಕಡಿಮೆ ಗೋಚರತೆ ಹಾಗೂ ಜಲಚರಗಳಿಗೆ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಜಿಲ್ಲಾ ಕೇಂದ್ರವಾದ ಸೆಪ್ಪಾದಲ್ಲಿ ಶುಕ್ರವಾರ ನದಿಯಲ್ಲಿ ಸಾವಿರಾರು ಮೀನುಗಳು ಸತ್ತಿರುವುದು ಕಂಡುಬಂದಿದೆ ಎಂದು ಜಿಲ್ಲಾ ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿ (ಡಿಎಫ್‌ಡಿಒ) ಹಾಲಿ ತಾಜೋ ತಿಳಿಸಿದ್ದಾರೆ.