ಕಡಬ : ಶಂಕಿತ ರೇಬಿಸ್ ವೈರಸ್ ಗೆ ಶಾಲಾ ವಿದ್ಯಾರ್ಥಿನಿ ಬಲಿ!
Saturday, October 2, 2021
ಮಂಗಳೂರು: ರೇಬಿಸ್ ವೈರಸ್‌ಗೆ ಶಾಲಾ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಕಡಬ ಸಮೀಪದ ಆಲಂಕಾರು ಎಂಬಲ್ಲಿ ನಡೆದಿದೆ. ಇದ್ದೊಬ್ಬ ಪುತ್ರಿಯನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಆಲಂಕಾರು ಗ್ರಾಮದ ಕೆದಿಲದ ವರ್ಗಿಸ್ ಎಂಬವರ ಪುತ್ರಿ ಎನ್ಸಿ (17) ಮೃತ ವಿದ್ಯಾರ್ಥಿನಿ.
ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ಎನ್ಸಿಗೆ ಗುರುವಾರ ಬೆಳಗ್ಗೆ ಏಕಾಏಕಿ ತಲೆನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಔಷಧಿ ಪಡೆದುಕೊಳ್ಳಲಾಗಿತ್ತು.
ಆದರೆ, ಸಂಜೆ ವೇಳೆಗೆ ಮತ್ತೆ ತಲೆನೋವು ಕಾಣಿಸಿಕೊಂಡಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡ ರಾತ್ರಿ ಎನ್ಸಿ ಮೃತಪಟ್ಟಿದ್ದಾರೆ.
ಸುಮಾರು 4 ತಿಂಗಳ ಹಿಂದೆ ಆಲಂಕಾರು ಪೇಟೆ ಸೇರಿದಂತೆ ಮೃತಪಟ್ಟ ಬಾಲಕಿ ಮನೆಯ ಸುತ್ತಮುತ್ತ ಹುಚ್ಚು ನಾಯಿಯೊಂದು ಕಾಣಿಸಿಕೊಂಡಿತ್ತು. ಈ ಹುಚ್ಚು ನಾಯಿ ಅಲಂಕಾರು ಪೇಟೆಯಲ್ಲಿರುವ ಬೀದಿ ನಾಯಿಗಳು ಸೇರಿದಂತೆ ಇಬ್ಬರ ಮೇಲೆಯು ದಾಳಿ ನಡೆಸಿತ್ತು. ಅದೇ ರೀತಿ ಮೃತ ವಿದ್ಯಾರ್ಥಿನಿ ಎನ್ಸಿ ಮನೆಯ ನಾಯಿಯೂ ಕೆಲ ತಿಂಗಳುಗಳ ಹಿಂದಷ್ಟೇ ರೇಬೀಸ್ ವೈರಸ್ ಗೆ ಒಳಗಾಗಿ ಸಾವನ್ನಪ್ಪಿತ್ತು. ಅದೇ ನಾಯಿಯ ವೈರಸ್ ವಿದ್ಯಾರ್ಥಿನಿಗೂ ತಗಲಿರ ಬಹುದೆಂದು ಅಂದಾಜಿಸಲಾಗಿದೆ.
2018ರ ಏಪ್ರಿಲ್ ತಿಂಗಳಲ್ಲಿ ಮೃತಳ ಸಹೋದರನೂ ಆಕಸ್ಮಿಕವಾಗಿ ನದಿಗೆ ಬಿದ್ದು ಸಾವನಪ್ಪಿದ್ದ. ಆದರೆ ಇದೀಗ ಇದ್ದ ಏಕೈಕ ಪುತ್ರಿಯೂ ಈ ರೀತಿಯಲ್ಲಿ ಮೃತಪಟ್ಟಿರೋದರಿಂದ ಪೋಷಕರ ರೋದನ ಮುಗಿಲು ಮುಟ್ಟಿದೆ.