
ಮಂಗಳೂರು ಶೂಟೌಟ್ ಪ್ರಕರಣದ ಬಾಲಕ ಮೃತ್ಯು
Friday, October 8, 2021
ಮಂಗಳೂರು: ನಗರದ ಮೋರ್ಗನ್ ಗೇಟ್ಸ್ ನ ಶೂಟೌಟ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕ ಸುಧೀಂದ್ರ ಪ್ರಭು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ನಗರದ ಮೋರ್ಗನ್ಸ್ ಗೇಟ್ ನ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಅವರು ಅ.5ರಂದು ಕೆಲಸದಾಳುಗಳ ಮೇಲೆ ಕುಪಿತಗೊಂಡು ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರು. ಆದರೆ ಇದು ತಪ್ಪಿ ಅವರ ಮಗ ಸುಧೀಂದ್ರ ಪ್ರಭುವಿಗೆ ತಗುಲಿತ್ತು. ತಕ್ಷಣ ಆತನನ್ನು ಯುನಿಟಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಆ ಬಳಿಕ ಆತನ ಮೆದುಳು ನಿಷ್ಕ್ರಿಯಗೊಂಡಿತ್ತು. ಇದರಿಂದ ಅವರ ಮನೆಯವರು ಆತನ ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ್ದರು. ಆದರೆ ಆ ಬಳಿಕ ಈ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು.
ಪುತ್ರನ ಮಿದುಳು ನಿಷ್ಕ್ರಿಯಗೊಂಡ ವಿಚಾರವು ತಿಳಿಯುತ್ತಿದ್ದಂತೆ ಉದ್ಯಮಿ ರಾಜೇಶ್ ಪ್ರಭುಗೆ ಹೃದಯಾಘಾತವಾಗಿತ್ತು. ತಕ್ಷಣ ಆತನನ್ನು ಪೊಲೀಸ್ ವಶದಲ್ಲಿರುವಂತೆಯೇ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ರಾಜೇಶ್ ಪ್ರಭು ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಸುಧೀಂದ್ರ ಪ್ರಭು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.