
ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವ ಪುತ್ರ ಕಾರು ಹರಿಸಿದ ಆರೋಪ: ಇಬ್ಬರು ಮೃತ್ಯು, ಹಲವರಿಗೆ ಗಾಯ
Sunday, October 3, 2021
ಲಖಿಂಪುರ್ ಖೇರಿ(ಉತ್ತರ ಪ್ರದೇಶ): ಪ್ರತಿಭಟನಾ ನಿರತ ರೈತರ ಮೇಲೆಯೇ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ತನ್ನ ಕಾರನ್ನು ಚಲಾಯಿಸಿರುವ ಆರೋಪ ಕೇಳಿಬಂದಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪರಿಣಾಮ ರೊಚ್ಚಿಗೆದ್ದ ಪ್ರತಿಭಟನಾರರು ಮೂರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಇಂದು ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರಿಂದ ಪ್ರತಿಭಟನೆ ನಡೆದಿತ್ತು. ಅಲ್ಲಿಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ನೀಡಬೇಕಿತ್ತು. ಈ ಹಿನ್ನೆಲೆಯಲ್ಲಿ ರೈತರು ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟವನ್ನು ತೋರಿಸಲು ಯೋಜನೆ ಕೈಗೊಂಡಿದ್ದರು. ಅಲ್ಲದೆ ಉಪ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಅಳವಡಿಸಿದ್ದ ಹೋರ್ಡಿಂಗ್‌ಗಳನ್ನು ಮುರಿದು ಟಿಕೊನಿಯಾದಲ್ಲಿ ಸಿದ್ಧಪಡಿಸಿದ ಹೆಲಿಪ್ಯಾಡ್ ಅನ್ನು ವಶಪಡಿಸಿಕೊಂಡರು.
ನಗರದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರು, ರೈತರು ವಿರುದ್ಧ ಹೇಳಿಕೆ ನೀಡಿದ್ದರು. ಅಲ್ಲದೆ ಪ್ರತಿಭಟನೆ ನಡೆಸುತ್ತಿರುವವರು ಪಾಲಿಯಾವನ್ನು ಬಿಡಬೇಕು ಮಾತ್ರವಲ್ಲದೆ ಜಿಲ್ಲೆಯನ್ನು ತೊರೆಯಬೇಕು ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಬಿಜೆಪಿ ನಾಯಕರು ಕಾರಿನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಅಥವಾ ಅದರಿಂದ ಕೆಳಗಿಳಿಯಲೂ ಸಾಧ್ಯವಾಗುವುದಿಲ್ಲ ಎಂದು ಟ್ವೀಟ್ಮಾಡಿದ್ದಾರೆ. ಗಾಜಿಪುರ ಗಡಿ ಸಮಿತಿಯ ವಕ್ತಾರ ಜಗ್ತಾರ್ ಸಿಂಗ್ ಬಾಜ್ವಾ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ರೈತರಿಗೆ ಮನವಿ ಮಾಡಿದ್ದಾರೆ.