
ಕಳವು ನಡೆಸಲು ಪತಿ ಬೆತ್ತಲಾಗಿ ಹೋಗುತ್ತಿದ್ದರೆ, ಪತ್ನಿ ಹೊರಗಡೆ ಕಾಯುತ್ತಿದ್ದಳು: ಖತರ್ನಾಕ್ ದಂಪತಿ ಅರೆಸ್ಟ್
Wednesday, October 27, 2021
ಬಾಗಲಕೋಟೆ: ಮೈಪೂರ್ತಿ ಎಣ್ಣೆ ಬಳಿದುಕೊಂಡು ಬೆತ್ತಲಾಗಿ ಹೋಗಿ ಕಳವು ಮಾಡುತ್ತಿದ್ದ ವ್ಯಕ್ತಿ ಹಾಗೂ ಆತನಿಗೆ ಸಹಕರಿಸುತ್ತಿದ್ದ ಪತ್ನಿಯನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ
ಸುರೇಶ್ ಶಿವಪೂರೆ ಮತ್ತು ಬಸಮ್ಮ ಸುರೇಶ್ ಶಿವಪೂರೆ ಬಂಧಿತ ಆರೋಪಿಗಳು.
ಈತ ಮೈಗೆ ಎಣ್ಣೆ ಬಳಿದುಕೊಂಡು ಹಲವಾರು ಮನೆಗಳಲ್ಲಿ ಜಾಣತನದಿಂದ ಕಳವುಗೈದು ಪರಾರಿಯಾಗುತ್ತಿದ್ದ. ಅಲ್ಲದೆ ಪೊಲೀಸರ ಕೈಗೂ ಸಿಕ್ಕದೆ ಚಳ್ಳೇಹಣ್ಣು ತಿನ್ನುಸುತ್ತಿದ್ದ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಇವರು ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ಬಹುತೇಕ ಭಾಗಗಳಲ್ಲಿ ಇದೇ ಮಾದರಿಯಲ್ಲಿ ಕಳವುಗೈದಿರುವುದು ಬೆಳಕಿಗೆ ಬಂದಿದೆ.
ಯಾರೂ ಇಲ್ಲದ ಮನೆಯನ್ನು ಟಾರ್ಗೆಟ್ ಮಾಡಿಕೊಂಡು ಸುರೇಶ್ ಶಿವಪೂರೆ ಬೆತ್ತಲಾಗಿ ಎಣ್ಣೆ ಬಳಿದುಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ. ಕಳವು ಕೃತ್ಯ ಗೊತ್ತಾಗಿ ಯಾರಾದರು ಹಿಡಿಯಲು ಬಂದರೂ ಅವರಿಗೆ ಸಿಗಬಾರದು ಎನ್ನುವ ಕಾರಣಕ್ಕಾಗಿ ಆರೋಪಿ ಮೈಗೆ ಎಣ್ಣೆ ಬಳಿಯುತ್ತಿದ್ದ. ಪತಿ ಒಳಗೆ ಕಳ್ಳತನ ಮಾಡುತ್ತಿದ್ದರೆ, ಪತ್ನಿ ಹೊರಗೆ ನಿಂತು ಯಾರಾದರೂ ಬರುತ್ತಾರೋ ಗಮನಿಸುತ್ತಿದ್ದಳು.
ಇತ್ತೀಚೆಗೆ ಕೆಲ ದಿನಗಳಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲವಾರು ಮನೆಗಳಲ್ಲಿ ಕಳ್ಳತನ ನಡೆದಿತ್ತು. ಕೃತ್ಯ ಎಸಗಿದವರು ಮಾತ್ರ ತಪ್ಪಿಸಿಕೊಳ್ಳುತ್ತಿದ್ದರು.
ಆದ್ದರಿಂದ ಕಳ್ಳರ ಬೇಟೆಗೆ ಬಾದಾಮಿ ಪೊಲೀಸ್ ಸಿಪಿಐ ರಮೇಶ್ ಹಾನಾಪೂರ ನೇತೃತ್ವದಲ್ಲಿ ಬಲೆ ಬೀಸಲಾಗಿತ್ತು. ಕೊನೆಗೂ ಖದೀಮರು ಸಿಕ್ಕಿಬಿದ್ದಿದ್ದಾರೆ. ಈ ದಂಪತಿಯಿಂದ 10.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 15 ಸಾವಿರ ರೂ. ಬೆಲೆಬಾಳುವ ಬೆಳ್ಳಿ ಆಭರಣ, ಕಳ್ಳತನಕ್ಕೆ ಬಳಸುತ್ತಿದ್ದ ಮೋಟರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಸದ್ಯ ಇವರ ವಿರುದ್ಧ 46 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.