
ಪತಿಯ ಹಣದ ದಾಹ, ಮೈದುನನ ಕಾಮದಾಹಕ್ಕೆ ಯುವತಿ ಬಲಿ
Friday, October 8, 2021
ಕಲಬುರಗಿ: ಆರು ತಿಂಗಳ ಹಿಂದಷ್ಟೇ ಮದುವೆಯಾಗಿ ಹೊಸ ಬದುಕಿನ ಕನಸು ಕಂಡು ಪತಿಯ ಮನೆಗೆ ಪ್ರವೇಶಿಸಿದ್ದ ಯುವತಿ ಪತಿಯ ಹಣದ ಹಾಗೂ ಮೈದುನನ ಕಾಮದಾಹಕ್ಕೆ ಬಲಿಯಾಗಿದ್ದಾಳೆ. ಮೃತ ಯುವತಿಯ ಸಾವಿಗೆ ಆಕೆಯ ಪತಿ ಹಾಗೂ ಮೈದುನನೇ ಕಾರಣ ಎಂದು ಆಕೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿ ನಗರದ ಪ್ರಗತಿ ಕಾಲನಿ ನಿವಾಸಿ ಲೋಕೇಶ್ ಎಂಬಾತನ ಪತ್ನಿ ಸುಗುಣ(22) ಮೃತ ದುರ್ದೈವಿ.
ಸೇಡಂ ಡಿಪೋದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನಾಗಿದ್ದ ಆರೋಪಿ ಲೋಕೇಶ್ಗೆ ಮೃತ ಸುಗುಣರೊಂದಿಗೆ 6 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು.
ಮದುವೆಯ ಬಳಿಕ ದಂಪತಿಯಿಬ್ಬರೂ ಕಲಬುರಗಿ ನಗರದ ಪ್ರಗತಿ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರು. ಇವರ ಜತೆ ಲೋಕೇಶ್ನ ಸಹೋದರನೂ ವಾಸವಿದ್ದ. ವಿವಾಹದ ಸಂದರ್ಭ ವರದಕ್ಷಿಣೆ ರೂಪದಲ್ಲಿ 120 ಗ್ರಾಂ ಚಿನ್ನ, 5 ಲಕ್ಷ ರೂ. ನಗದು ನೀಡಲಾಗಿತ್ತು. ಆದರೂ ಮತ್ತಷ್ಟು ಹಣಕ್ಕಾಗಿ ಲೋಕೇಶ್ ಪತ್ನಿಯನ್ನು ಪೀಡಿಸುತ್ತಿದ್ದ. ಅದಲ್ಲದೆ ಲೋಕೇಶ್ ಸಹೋದರ ಸುಗುಣಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಸುಗುಣಾ ಮನೆಯವರು ಆರೋಪಿಸಿದ್ದಾರೆ.
ಗುರುವಾರ ರಾತ್ರಿ ಸುಗುಣ ಮೃತದೇಹ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ಪತಿ ಹಾಗೂ ಮೈದುನನೇ ಗುರುವಾರ ರಾತ್ರಿ ಸುಗುಣ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಫ್ಯಾನಿಗೆ ನೇತು ಹಾಕಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಕಲಬುರಗಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.