
ಪತಿಯ ವರದಕ್ಷಿಣೆ ದಾಹಕ್ಕೆ ಪತ್ನಿ ಬಲಿ!
Friday, October 8, 2021
ಪುಣೆ: ಪತಿಯ ವರದಕ್ಷಿಣೆ ದಾಹಕ್ಕೆ ಪತ್ನಿ ಬಲಿಯಾದ ಘಟನೆ ಪುಣೆಯಲ್ಲಿ ನಡೆದಿದೆ. ಯುವತಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿಯನ್ನು ಮಹಾರಾಷ್ಟ್ರದ ಪುಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೇರಳ ಮೂಲದ ಯುವತಿ ಪ್ರೀತಿ (29) ಮೃತಪಟ್ಟ ದುರ್ದೈವಿ.
ಪುಣೆಯಲ್ಲಿರುವ ಪತಿ ಅಖಿಲ್ ಮನೆಯಲ್ಲಿ ಪತ್ನಿ ಪ್ರೀತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಬುಧವಾರ ಪತ್ತೆಯಾಗಿತ್ತು. ಪತಿ ಅಖಿಲ್ನನ್ನು ಬಂಧಿಸಿರುವ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಬಗ್ಗೆ ಮೃತಪಟ್ಟ ಪ್ರೀತಿಯ ತಂದೆ ಪ್ರತಿಕ್ರಿಯಿಸಿ, ತನ್ನ ಪುತ್ರಿ ಕೌಟುಂಬಿಕ ಹಿಂಸೆಗೆ ಬಲಿಯಾಗಿದ್ದಾಳೆಂದು ಆರೋಪಿಸಿದ್ದಾರೆ. ಅಲ್ಲದೆ, ಆಕೆ ಮೃತಪಟ್ಟಿರುವ ವಿಚಾರವನ್ನು ನಮಗೆ ತಿಳಿಸಿರಲಿಲ್ಲ. ಬೇರೊಬ್ಬರಿಂದ ನಮಗೆ ಈ ಮಾಹಿತಿ ತಿಳಿದು ಬಂದಿದೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಅವಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಪ್ರೀತಿಯ ಮೃತದೇಹದಲ್ಲಿ ಗಾಯದ ಕಲೆಗಳಿದ್ದವು. ಪ್ರೀತಿ ಹಾಗೂ ಅಖಿಲ್ ವಿವಾಹ 5 ವರ್ಷಗಳ ಹಿಂದೆ ನಡೆದಿತ್ತು. ಈ ವೇಳೆ ವರದಕ್ಷಿಣೆಯಾಗಿ 85 ಲಕ್ಷ ರೂ. ನಗದು ಮತ್ತು 120 ಸವರನ್ ಚಿನ್ನವನ್ನು ನೀಡಲಾಗಿತ್ತು. ಆದಾಗ್ಯೂ ಅಖಿಲ್ ಆಗಾಗ ಹೆಚ್ಚಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದೀಗ ಪೊಲೀಸರು ಅಖಿಲ್ ತಾಯಿಯನ್ನೂ ವಿಚಾರಣೆ ನಡೆಸುತ್ತಿದ್ದಾರೆ.