ತುಂಬಾ ಬೆವರುತ್ತಿದೆ ಎಂದು ಬಂದಿದ್ದ ಅಪ್ಪು: ಕೊನೆಯ ಕ್ಷಣದ ಮಾಹಿತಿ ಬಿಚ್ಚಿಟ್ಟ ಡಾ.ರಮಣ ರಾವ್
Sunday, October 31, 2021
ಬೆಂಗಳೂರು: ವರ್ಷದೊಳಗಿನ ಮಗುವಿರುವಾಗಲೇ ತಂದೆ ಡಾ.ರಾಜ್ 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾ ರಂಗ ಪ್ರವೇಶಿರುವ ಪುನೀತ್ ರಾಜಕುಮಾರ್ ಅವರು ಬಳಿಕ ತಮ್ಮ 46 ನೇ ವಯಸ್ಸಿನವರೆಗೂ ತಮ್ಮ ಸಿನಿಮಾ, ಹಾಡಿನ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿದವರು.
ಇದೀಗ ಕನ್ನಡ ಸಿನಿಮಾ ಲೋಕದ ಮರೆಯಲಾಗದ ಮಾಣಿಕ್ಯವಾಗಿ ಮೆರೆದ ಅಪ್ಪು ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರಿಗೆ ಹೃದಯಾಘಾತವಾದ ಕೊನೆಯ ಕ್ಷಣದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಶುಕ್ರವಾರ ಬೆಳಿಗ್ಗೆ 11.20ಕ್ಕೆ ಪುನೀತ್ ತಮ್ಮ ಪತ್ನಿಯೊಂದಿಗೆ ಫ್ಯಾಮಿಲಿ ವೈದ್ಯ ಡಾ.ರಮಣ ರಾವ್ ಬಳಿ ಬಂದಿದ್ದರು. ಆಗ ಚೆನ್ನಾಗಿಯೇ ಇದ್ದ ಪುನೀತ್ ರಾಜ್‍ಕುಮಾರ್ ಅವರು ಆನಂತರ ಬದುಕಿದ್ದು ಮಾತ್ರ ಕೇವಲ ಹತ್ತು ನಿಮಿಷ.
ಈ ಬಗ್ಗೆ ವೈದ್ಯ ರಮಣ ರಾವ್ ಹೀಗೆ ಹೇಳಿದ್ದಾರೆ. ''ಪುನೀತ್ ರಾಜ್‌ಕುಮಾರ್ ಬರುತ್ತಲೇ ಏನೋ ಬೆವರುತ್ತಿದೆ ಎಂದು ಹೇಳಿದ್ದಾರೆ. ಆಗ 11.20 ಗಂಟೆಯಾಗಿತ್ತು. ಯಾವತ್ತಿನ ರೀತಿಯಲ್ಲೇ ಬೆಳಗ್ಗಿನ ಜಿಮ್ ಅಭ್ಯಾಸದಲ್ಲಿದ್ದೆ. ನಿನ್ನೆಯಿಂದಲೂ ಸ್ವಲ್ಪ ಬೆವರು ಜಾಸ್ತಿಯಿದೆ ಎಂದಿದ್ದರು. ಆದ್ದರಿಂದ ತಕ್ಷಣ ಇಸಿಜಿ ಮಾಡಿದ್ದೇನೆ. ಆದರೆ ರಕ್ತದೊತ್ತಡ ಮತ್ತೆಲ್ಲಾ ಆರೋಗ್ಯ ಸ್ಥಿರವಾಗಿಯೇ ಇತ್ತು. ಆದರೆ, ಅವರು ತೀವ್ರವಾಗಿ ಬೆವರುತ್ತಿದ್ದುದರಿಂದ ಹೃದಯದಲ್ಲಿ ಏನೋ ತುಂಬ ಒತ್ತಡ ಇದ್ದುದು ಕಂಡುಬಂದಿತ್ತು. ತಕ್ಷಣ ಅವರಿಗೆ ಆಸ್ಪತ್ರೆಗೆ ದಾಖಗಬೇಕೆಂದು ತಿಳಿಸಿದೆ' ಎಂದರು.
ನನ್ನ ಛೇಂಬರ್ ನಿಂದ ಹೊರಬರುತ್ತಿದ್ದಂತೆ ಪುನೀತ್ ರಾಜ್‍ಕುಮಾರ್ ತಮಗೇನೋ ನಡೆಯೋಕೆ ಆಗುತ್ತಿಲ್ಲ. ಆಯಾಸವಾಗ್ತಿದೆ ಎಂದರು. ತಕ್ಷಣ ಕಾರಿನಲ್ಲಿಯೇ ಅವರನ್ನು ಮಲಗಿಸಿಯೇ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕೇವಲ ಐದು ನಿಮಿಷದಲ್ಲಿ ಅವರು ಆಸ್ಪತ್ರೆ ತಲುಪಿದ್ದಾರೆ. ಆದರೆ, ಅದಾಗಲೇ ಅವರು ಮೃತಪಟ್ಟಿದ್ದರು. ಅವರಿಗೆ ಬೇರಾವುದೇ ತೊಂದರೆ ಇರಲಿಲ್ಲ. ಮಧುಮೇಹ ಇನ್ನಿತರ ಯಾವುದೇ ಸಮಸ್ಯೆಗಳಿರಲಿಲ್ಲ. ಅಪ್ಪು ತಮ್ಮ ದೇಹಾರೋಗ್ಯವನ್ನು, ದೇಹವನ್ನು ಸೂಪರ್ ಆಗಿ ಮೈಂಟೈಂನ್ ಮಾಡಿಕೊಂಡಿದ್ದರು. ಆದರೆ, ಈ ಹಠಾತ್ ಮರಣ ಅನ್ನುವುದು ಯಾವ ಸಂದರ್ಭದಲ್ಲಿಯೂ ಆಗಬಹುದು.
ಪುನೀತ್ ರಾಜ್ಕುಮಾರ್ ಅವರಿಗೆ ಆಗಿರೋದು ಹೃದಯಾಘಾತವಲ್ಲ. ಹಾಗಾಗಿದ್ದರೆ ತುಂಬ ನೋವು ಬರುತ್ತದೆ. ಡಯಾಬಿಟೀಸ್ ಇದ್ದರೆ ಅಷ್ಟು ನೋವು ಇರೋದಿಲ್ಲ. ಆದರೆ ಅಪ್ಪುವಿಗೆ ಅದೇನೂ ಇರಲಿಲ್ಲ. ಕಾರ್ಡಿಯಾಕ್ ಅರೆಸ್ಟ್ ಆಗುವ ಮೂಲಕ ಅವರಿಗೆ ಹೃದಯ ಸ್ತಂಭನವಾಗಿರಬೇಕು ಅನಿಸುತ್ತಿದೆ. ಈ ರೀತಿಯ ಹಠಾತ್ತನೆ ಮರಣ ಆಗುವಾಗ ಯಾವುದೇ ಮುನ್ಸೂಚನೆ ಇರೋದಿಲ್ಲ. ಒಮ್ಮೆಲೇ ಅತಿ ಹೆಚ್ಚಿನ ಕೆಲಸ ಮಾಡಿದ್ದಲ್ಲಿ ಹೃದಯ ಕವಾಟಗಳಿಗೆ ಪೆಟ್ಟು ಬಿದ್ದು ಈ ರೀತಿ ಆಗುತ್ತದೆ. ಹಾರ್ಟ್ ಒಳಗಿನ ಕವಾಟ ಒಡೆದು ರಕ್ತ ಸೋರಿಕೆಯಾಗಿ ಒಂದೆರಡು ಗಂಟೆಯಲ್ಲಿ ನಿಧಾನಕ್ಕೆ ಮರಣ ಸಂಭವಿಸುತ್ತದೆ ಎಂದು ರಮಣ ರಾವ್ ಹೇಳುತ್ತಾರೆ.