
ಆರ್ಯನ್ ಖಾನ್ ಗೆ ಡ್ರಗ್ಸ್ ಸರಬರಾಜು ಮಾಡಿರುವ ಸ್ಪೋಟಕ ಮಾಹಿತಿ ವಾಟ್ಸ್ಆ್ಯಪ್ ಸಂದೇಶದಿಂದ ಬಹಿರಂಗ? : ಅನನ್ಯಾ ಪಾಂಡೆಗೆ ಸಂಕಷ್ಟ
Saturday, October 23, 2021
ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಬ್ಬ ಬಾಲಿವುಡ್ ನಟ ಚಂಕಿ ಪಾಂಡೆ ಪುತ್ರಿ ನಟಿ ಅನನ್ಯಾ ಪಾಂಡೆಯನ್ನು ಎನ್ಸಿಬಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.
ವಿಚಾರಣೆಯ ಸಂದರ್ಭದಲ್ಲಿ ಅನನ್ಯಾ ಪಾಂಡೆ ನ್ಯಾಯಾಂಗ ಬಂಧನದಲ್ಲಿರುವ ಶಾರುಖ್ ಪುತ್ರ ಆರ್ಯನ್ ಖಾನ್ಗೆ ಗಾಂಜಾ ಒದಗಿಸುದಾಗಿ ಹೇಳಿದ್ದಳು ಎಂಬುದು ವಾಟ್ಸ್ಆ್ಯಪ್ ಸಂದೇಶದಿಂದ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಬಂಧಿತ ಆರ್ಯನ್ ಖಾನ್ನ ವಾಟ್ಸ್ಆ್ಯಪ್ ಸಂಭಾಷಣೆಗಳ ಆಧಾರದ ಮೇಲೆ ತನಿಖೆ ಮುಂದುವರೆಸಿರುವ ಎನ್ಸಿಬಿ ಅಧಿಕಾರಿಗಳಿಗೆ, ಅನನ್ಯಾರಿಂದ ಆರ್ಯನ್ ಖಾನ್ ಡ್ರಗ್ಸ್ ಪಡೆಯುವ ಬಗ್ಗೆ ಮಾತನಾಡಿರುವ ಮಾಹಿತಿ ಲಭ್ಯವಾಗಿದೆ.
ಒಂದು ಸಂಭಾಷಣೆಯಲ್ಲಿ ಆರ್ಯನ್ ಖಾನ್ 'ಗಾಂಜಾ ಪಡೆಯಲು ಏನಾದರೂ ‘ಜುಗಾಡ್’ ಮಾಡಲು ಸಾಧ್ಯವೇ' ಎಂದು ಅನನ್ಯಾರಲ್ಲಿ ಕೇಳಿದ್ದಾನೆ. ಅದಕ್ಕೆ ಅನನ್ಯಾ, ‘ಅರೇಂಜ್ ಮಾಡುವೆ’ ಎಂದು ಹೇಳಿದ್ದಾಳೆ ಎಂದು ಎನ್ಸಿಬಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಅನನ್ಯಾರ ವಿಚಾರಣೆ ನಡೆಸುತ್ತಿರುವ ಎನ್ಸಿಬಿ ಅಧಿಕಾರಿಗಳು ಈ ಬಗ್ಗೆ ಆಕೆಯನ್ನು ವಿವಿಧ ರೀತಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಅನನ್ಯಾ ಪಾಂಡೆ, ಆರ್ಯನ್ಗೆ ಡ್ರಗ್ಸ್ ಒದಗಿಸಿದ್ದಕ್ಕೆ ಸದ್ಯಕ್ಕೆ ಮತ್ತೆ ಯಾವುದೇ ಪುರಾವೆಗಳು ಲಭ್ಯವಾಗದಿದ್ದರೂ, ಇನ್ನೂ ಕೆಲವು ಸಂಭಾಷಣೆಗಳಲ್ಲಿ ಇಬ್ಬರೂ ಡ್ರಗ್ಸ್ ಬಗ್ಗೆ ಮಾತನಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಲ್ಲದೆ, ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಎನ್ಡಿಪಿಎಸ್ ವಿಶೇಷ ನ್ಯಾಯಾಲಯ, ಅಕ್ಟೋಬರ್ 30 ರವರೆಗೆ ಆತನಿಗೆ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಆದೇಶಿಸಿದೆ ಎನ್ನಲಾಗಿದೆ.