
ಆನೆ ಹಿಂಡಿನಿಂದ ಬೇರ್ಪಟ್ಟ ಮರಿಯಾನೆಯನ್ನು ಮತ್ತೆ ಕುಟುಂಬದೊಂದಿಗೆ ಸೇರಿಸಿದ ಅರಣ್ಯ ಇಲಾಖೆ: ವೀಡಿಯೋ ಭಾರೀ ವೈರಲ್
Saturday, October 9, 2021
ತಮಿಳುನಾಡು: ಆನೆ ಹಿಂಡಿನಿಂದ ಬೇರ್ಪಟ್ಟ ಮರಿ ಆನೆಯನ್ನು ರಕ್ಷಿಸಿ, ಅದರ ಕುಟುಂಬದ ಜೊತೆಗೆ ಸೇರಿಸಿರುವ ಅರಣ್ಯ ಇಲಾಖೆಯ ಕಾರ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಹೃದಯಸ್ಪರ್ಶಿ ವೀಡಿಯೋವೀಗ ಎಲ್ಲೆಡೆ ವೈರಲ್ ಆಗಿದೆ.
ಮರಿ ಆನೆಯನ್ನು ರಕ್ಷಿಸಿ ಆನೆಯ ಕುಟುಂಬವನ್ನು ಹುಡುಕಲು ಅರಣ್ಯ ಇಲಾಖೆಯ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹರಿದಾಡುತ್ತಿದೆ. ತಮಿಳುನಾಡು ರಾಜ್ಯದ ನೀಲಗಿರಿ ಪರ್ವತಗಳಲ್ಲಿರುವ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.
ಇದರ ವೀಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡ ತಮಿಳುನಾಡು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು, ಅರಣ್ಯ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಯು ಮರಿ ಆನೆಯ ಮೇಲೆ ಪ್ರೀತಿಯ ಸುರಿಮಳೆಯನ್ನೇ ಬೀರಿದ್ದಾರೆ ಎಂದು ಸುಪ್ರಿಯಾ ಸಾಹು ನೆನೆಸಿಕೊಂಡಿದ್ದಾರೆ. ಮತ್ತೊಂದು ವೀಡಿಯೋದಲ್ಲಿ ಮರಿ ಆನೆಯು ಎತ್ತರದ ದಿಬ್ಬಗಳಲ್ಲಿ ನಿಂತು ತನ್ನ ತಾಯಿಯನ್ನು ಗುರುತಿಸಿ ಸಂತೋಷದಿಂದ ಜೋರಾಗಿ ಘೀಳಿಡುವ ಪರಿಯನ್ನು ವಿಡಿಯೋದಲ್ಲಿ ನೋಡಬಹುದು.
ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಾದ ಸಚಿನ್, ವೆಂಕಟೇಶ್ ಪ್ರಭು, ಪ್ರಸಾದ್, ವಿಜಯ್, ಪ್ರವೀಣ್, ತಂಬ ಕುಮಾರ್, ಅನೀಶ್ ಕುಮಾರ್ ಮತ್ತು ಪಂಡಲೂರ್ ಎಂದು ಐಎಎಸ್ ಅಧಿಕಾರಿ ಮಾಹಿತಿ ತಿಳಿಸಿದ್ದಾರೆ.