
Mangaluru: ಪೊಲೀಸರಿಗೇ ತಲವಾರು ದಾಳಿನಡೆಸಿ ಎಸ್ಕೇಪ್ ಆದ ಉಳ್ಳಾಲದ ನಟೋರಿಯಸ್ ರೌಡಿ
Thursday, October 21, 2021
ಮಂಗಳೂರು: ನಟೋರಿಯಸ್ ರೌಡಿಯೋರ್ವ ವಾರಂಟ್ ಪ್ರಕರಣವೊಂದರಲ್ಲಿ ವಶಕ್ಕೆ ಪಡೆಯಲು ತೆರಳಿದ್ದ ಪೊಲೀಸರ ಮೇಲೆಯೇ ತಲವಾರು ಬೀಸಿ ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಇದೀಗ ಆತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ನಟೋರಿಯಸ್ ರೌಡಿ ಪರಾರಿಯಾಗಲು ಸಹಕರಿಸಿದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಮುಕ್ಕಚ್ಚೇರಿ ಬಳಿಯ ಧರ್ಮನಗರ ನಿವಾಸಿ ನಟೋರಿಯಸ್ ರೌಡಿಯಾಗಿದ್ದ ಮುಕ್ತಾರ್ ಅಹ್ಮದ್ ಎಂಬಾತನ ಮೇಲೆ ಹತ್ತಕ್ಕೂ ಹೆಚ್ಚು ಕೇಸುಗಳಿದ್ದು, ಆತ ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಉಳ್ಳಾಲ ಪೊಲೀಸರು ಕೋರ್ಟ್ ನಿಂದ ವಾರಂಟ್ ಪಡೆದು ಇಂದು ಬೆಳಗ್ಗೆ ಬಂಧಿಸಲು ತೆರಳಿದ್ದರು. ಧರ್ಮನಗರದಲ್ಲಿರುವ ಆತ ಮನೆಗೆ ಪೊಲೀಸರು ಬಂದಾಗ ತಲವಾರು ಹಿಡಿದುಕೊಂಡೇ ಹೊರಬಂದ ಮುಕ್ತಾರ್, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅಲ್ಲಿಂದ ತಲವಾರು ತೋರಿಸುತ್ತಲೇ ನಿಜಾಮುದ್ದೀನ್ ಎಂಬವನ ಬೈಕಿನಲ್ಲಿ ಪರಾರಿಯಾಗಿದ್ದಾನೆ.
ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ್ದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ರಸ್ತೆಯಲ್ಲಿ ಅಡ್ಡಹಾಕಿ ಬೈಕನ್ನು ಹಿಡಿದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮುಕ್ತಾರ್ ಅಹ್ಮದ್ ಬೈಕಿನಿಂದ ಇಳಿದು ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಬೈಕಿನಲ್ಲಿದ್ದ ನಿಜಾಮುದ್ದೀನ್ ಎಸ್ಕೇಪ್ ಆಗುವ ಯತ್ನದಲ್ಲಿ ಮುಂದಿನಿಂದ ಬಂದ ವ್ಯಾಗನರ್ ಕಾರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ, ನಿಜಾಮುದ್ದೀನ್ ನನ್ನು ಬಂಧಿಸಿದ್ದಾರೆ.
ಈತ ಟಾರ್ಗೆಟ್ ಗ್ಯಾಂಗ್ ಲೀಡರ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ದಾವೂದ್ ಎಂಬಾತನ ತಮ್ಮನಾಗಿದ್ದು ಆತನ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮುಕ್ತಾರ್ ವಿರುದ್ಧ ಉಳ್ಳಾಲ ಠಾಣೆ ಒಂದರಲ್ಲೇ ಏಳು ಪ್ರಕರಣಗಳಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.