
ಆರ್‌ಎಸ್ಎಸ್ ವಿರುದ್ಧ ಹೇಳಿಕೆ ಆರೋಪ: ಜಾವೇದ್ ಅಖ್ತರ್ ಮೇಲೆ ಎಫ್ಐಆರ್ ದಾಖಲು
Tuesday, October 5, 2021
ಮುಂಬೈ: ಆರ್‌ಎಸ್ಎಸ್ ವಿರುದ್ಧ ಹೇಳಿಕೆ ನೀಡಿರುವ ಆರೋಪದ ಮೇಲೆ ಬಾಲಿವುಡ್‌ನ ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ವಕೀಲ ವಕೀಲ ಸಂತೋಷ್ ದುಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಸಂತೋಷ್ ದುಬೆ ನೀಡಿರುವ ದೂರಿನನ್ವಯ ಮುಲುಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 500 (ಮಾನನಷ್ಟ) ಕಾಯ್ದೆಯನ್ವಯ ಎಫ್ ಐಆರ್ ದಾಖಲಾಗಿರುವುದಾಗಿ ಮುಲುಂಡ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸುದ್ದಿವಾಹಿನಿಯೊಂದರಲ್ಲಿ ನಡೆದ ಸಂದರ್ಶನದಲ್ಲಿ ಜಾವೇದ್ ಅಖ್ತರ್ ಅವರು ಆರ್‌ಎಸ್‌ಎಸ್ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಹೊರಿಸಿದ್ದಾರೆ ಎಂದು ಆರೋಪಿಸಿ ವಕೀಲ ಸಂತೋಷ್ ದುಬೆ ನೋಟಿಸ್ ನೀಡಿದ್ದರು. ಸಂದರ್ಶನದಲ್ಲಿ ಜಾವೇದ್ ಅಖ್ತರ್ ತಾಲಿಬಾನ್ ಮತ್ತು ಹಿಂದೂ ತೀವ್ರಗಾಮಿಗಳ ನಡುವೆ ಸಾಮ್ಯತೆಯಿದೆ ಎಂಬ ರೀತಿ ಮಾತನಾಡಿದ್ದರು. ಈ ಕುರಿತು ಅಖ್ತರ್ ಕ್ಷಮೆಯಾಚಿಸುವಂತೆ ನೋಟಿಸ್‌ನಲ್ಲಿ ಒತ್ತಾಯಿಸಲಾಗಿತ್ತು.