
ವಿದೇಶಿ ಯುವಕನೊಂದಿಗೆ ವಿವಾಹವಾಗಿರೋದನ್ನು ಬೇಬಿ ಬಂಪ್ ಫೋಟೊದೊಂದಿಗೆ ಬಹಿರಂಗ ಪಡಿಸಿದ ನಟಿ ಫ್ರೀಡಾ ಪಿಂಟೊ
Friday, October 22, 2021
ಮುಂಬೈ: 'ಸ್ಲಮ್‌ಡಾಗ್ ಮಿಲಿಯನೇರ್' ಸಿನಿಮಾ ಖ್ಯಾತಿಯ ನಟಿ ಫ್ರೀಡಾ ಪಿಂಟೋ ಹಲವು ವರ್ಷಗಳ ಹಿಂದೆ ವಿವಾಹವಾಗಿರುವ ವಿಚಾರವನ್ನು ಇದೀಗ ಬಹಿರಂಗಪಡಿಸಿದ್ದಾರೆ. ಈ ಮೂಲಕ ಸಾಹಸಿ ಫೋಟೋಗ್ರಾಫರ್ ಟ್ರಾನ್ ಅವರನ್ನು ವರಿಸಿರುವ ಬಗ್ಗೆ ಫ್ರೀಡಾ ಪಿಂಟೋ ಹೇಳಿದ್ದಾರೆ.
ಬಾಲಿವುಡ್ ಸಿನಿಮಾಗಳ ಜೊತೆಗೆ ಹಾಲಿವುಡ್ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿರುವ ಫ್ರೀಡಾಗೆ ಕೆಲವು ವರ್ಷಗಳ ಹಿಂದೆ ಫೋಟೋಗ್ರಾಫರ್ ಟ್ರಾನ್ ಪರಿಚಯವಾಗಿದೆ. ಈ ಜೋಡಿ ವರ್ಷಗಳ ಹಿಂದೆ ಅಮೆರಿಕಾದ ವೆಸ್ಟ್ ಹಾಲಿವುಡ್‌ನ ಐಷಾರಾಮಿ ಹೋಟೆಲೊಂದಕ್ಕೆ ಡಿನ್ನರ್ ಡೇಟಿಂಗ್‌ಗೆ ಹೋಗಿದ್ದು ಸುದ್ದಿಯಾಗಿತ್ತು. ಆ ಬಳಿಕ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದು, ಜೀವನ ಸಂಗಾತಿಗಳಾಗುವ ನಿರ್ಧಾರಕ್ಕೆ ಬಂದಿದ್ದರಂತೆ. ಇದೀಗ ಫ್ರೀಡಾ ಜನ್ಮದಿನದಂದೇ ಆಕೆ ಗರ್ಭಿಣಿಯಾಗಿರುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಈಗ ಅವರು ತಮ್ಮ ಮದುವೆಯಾಗಿರುವ ಬಗ್ಗೆ ಇದೇ ಮೊದಲ ಬಾರಿಗೆ ಇನ್ ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದಾರೆ.
ಬೇಬಿ ಬಂಪ್ ಫೋಟೋ ಶೇರ್ ಮಾಡಿರುವ ಅವರು, 'ನನಗೆ ಭಾರತದಲ್ಲಿ ನಡೆಯುವ ಐಷಾರಾಮಿ, ದುಂದುವೆಚ್ಚದ ಮದುವೆಯ ಬಗ್ಗೆ ಆಸಕ್ತಿಯಿಲ್ಲ. ಯಾವತ್ತೂ ವಿವಾಹವೆಂಬುದು ಸರಳ ಹಾಗೂ ಸುಂದರವಾಗಿರಬೇಕು ಎನ್ನುವುದು ನನ್ನ ಬಯಕೆ. ಅದೇ ಸಮಯಕ್ಕೆ ಕೋವಿಡ್ ಸೋಂಕು ಕಾಣಿಸಿಕೊಂಡಿತು. ಈಗಲೂ ಪೂರ್ತಿಯಾಗಿ ನಿವಾರಣೆಯಾಗಿಲ್ಲ. ಆದ್ದರಿಂದ ಮದುವೆಯ ಬಗ್ಗೆ ಪ್ಲ್ಯಾನ್ ಮಾಡುತ್ತಾ ಕುಳಿತಲ್ಲಿ ಬದುಕೆಲ್ಲಾ ಅದರಲ್ಲೇ ಕಳೆದು ಬಿಡುತ್ತದೆ ಅನ್ನುವುದನ್ನು ಚಿಂತನೆ ಮಾಡಿಕೊಂಡ ನಾವು ಸರಳವಾಗಿ ಮದುವೆಯಾದೆವು' ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ತಿಳಿಸಿದ್ದಾರೆ.
'ಮದುವೆಯ ಪ್ಲ್ಯಾನಿಂಗ್ ಮಾಡುತ್ತಾ ಹೊಟ್ಟೆಯಲ್ಲಿ ಹುಣ್ಣು ಮಾಡಿಕೊಳ್ಳುವುದು ನಮಗೆ ಬೇಕಾಗಿರಲಿಲ್ಲ. ನಮ್ಮ ಮದುವೆ ಪರ್ಫೆಕ್ಟ್ ಆಗಿತ್ತು. ನಾವು ಮದುವೆ ಮಾಡಿಕೊಂಡ ದಿನ ಮಧ್ಯಾಹ್ನ ಮನೆಗೆ ಹೋಗಿ ನಿದ್ರೆ ಮಾಡಿದ್ದೇವೆ' ಎಂದು ಫ್ರೀಡಾ ಬರೆದುಕೊಂಡಿದ್ದಾರೆ.
ಫ್ರೀಡಾ ಪಿಂಟೋ ಭಾರತೀಯ ಮೂಲದ ಹಾಲಿವುಡ್ ನಟಿ. ಈಕೆ ಮೂಲತಃ ಮಂಗಳೂರಿನ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು. ಆದರೆ ಫ್ರೀಡಾ ಬೆಳೆದಿರುವುದೆಲ್ಲಾ ಮುಂಬಯಿ ಮಹಾನಗರಿಯಲ್ಲಿ. ಈಗ ತುಂಬು ಗರ್ಭಿಣಿಯಾಗಿರುವ ಅವರು ಬೇಬಿ ಶವರ್ ಮತ್ತು ಬೇಬಿ ಬಂಪ್ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಾಲಿವುಡ್ನ ಹಲವಾರು ಕಲಾವಿದರು ಅವರಿಗೆ ಶುಭ ಹಾರೈಸುತ್ತಾ ಫೋಟೋಗಳನ್ನು ಮೆಚ್ಚಿಕೊಂಡಿದ್ದಾರೆ.