ಗ್ರಾಮವಾಸ್ತವ್ಯದ್ದಲ್ಲಿದ್ದ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಭೂಕಂಪನಕ್ಕೆ ಕಂಗಾಲು: ರಾತ್ರೋರಾತ್ರಿ ಗ್ರಾಮವಾಸ್ತವ್ಯ ಮೊಟಕು
Sunday, October 17, 2021
ಕಲಬುರಗಿ: ಕಲಬುರಗಿಯ ಗಡಿಕೇಶ್ವಾರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದ ಡಾ.ಉಮೇಶ ಜಾಧವ್ ಭೂಕಂಪಕ್ಕೆ ಕಂಗಾಲಾಗಿ ಗ್ರಾಮ ವಾಸ್ತವ್ಯವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರಬಂದಿರುವ ಘಟನೆ ನಡೆದಿದೆ.
ಕಲಬುರಗಿಯಿಂದ 75 ಕಿ.ಮೀ. ದೂರದಲ್ಲಿರುವ ಗಡಿಕೇಶ್ವಾರ ಗ್ರಾಮದಲ್ಲಿ ಡಾ.ಉಮೇಶ ಜಾಧವ್ ಗ್ರಾಮ ವಾಸ್ತವ್ಯ ಹೂಡಿದ್ದರು. ಆದರೆ ನಸುಕಿನ ಜಾವ 4 ಗಂಟೆ ಸುಮಾರಿಗೆ ಭೂಮಿಯ ಒಳಗಿನಿಂದ ಭಾರಿ ಪ್ರಮಾಣದ ಶಬ್ದ ಕೇಳಿ ಬಂದಿದೆ. ಭೂಮಿಯಲ್ಲಿ ಲಘು ಕಂಪನವೂ ಆದಿತ್ತು.
ಈ ಸಂದರ್ಭ ಸಂಸದ ಡಾ.ಉಮೇಶ್ ಜಾಧವ್ ಅವರು, ಸರಕಾರಿ ಶಾಲೆಯಲ್ಲಿ ಮಲಗಿದ್ದರು. ಲಘು ಭೂಕಂಪನಕ್ಕೆ ಶಾಲೆಯ ಕಟ್ಟಡವೂ ಅಲ್ಲಾಡಿದೆ. ಕಂಪನಕ್ಕೆ ಎಚ್ಚರಗೊಂಡ ಸಂಸದ ಕಂಗಾಲಾಗಿ ಹೊರ ಬಂದಿದ್ದಾರೆ.
ನಗರದ ಅವ್ಯವಸ್ಥೆ ಕುರಿತಂತೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಅರಿಯಲು ಸಂಸದ ಡಾ.ಉಮೇಶ್ ಜಾಧವ್ ಗ್ರಾಮವಾಸ್ತವ್ಯವನ್ನು ಮಾಡಿದ್ದರು. ಸಂಸದರು ವಾಸ್ತವ್ಯ ಹೂಡಿದ್ದ ಗಡಿಕೇಶ್ವಾರದಲ್ಲಿ ಮಧ್ಯರಾತ್ರಿ 1 ಗಂಟೆಯಿಂದ ಬೆಳಗಿನವರೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಕತ್ತಲಲ್ಲೇ ಸರಕಾರಿ ಶಾಲೆಯಲ್ಲಿ ರಾತ್ರಿ ಕಳೆದ್ದಿದ್ದ ಸಂಸದರು ಭೂಕಂಪನದಿಂದ ಬೆಚ್ಚಿಬಿದ್ದಿದ್ದರು. ಅವರು ಉಳಿದಿದ್ದ ಶಾಲೆಯ ಕೊಠಡಿಗೆ ಬೀಗವೂ ಇರಲಿಲ್ಲ.
ಗ್ರಾಮ ವಾಸ್ತವ್ಯದ ಅನುಭವದಿಂದ ಗ್ರಾಮದ ಸಮಸ್ಯೆ ಅರಿತ ಸಂಸದರು ಭೂಕಂಪನದಿಂದ ಬೆಚ್ಚಿಬಿದ್ದು ಜನರಿಗೆ ಧನ್ಯವಾದ ಹೇಳಿ ರಾತ್ರಿ ಉಡುಗೆಯಲ್ಲಿಯೇ ಗಡಿಕೇಶ್ವಾರದಿಂದ ಹೊರಟಿದ್ದಾರೆ. ‘ಸೋಮವಾರ ಕಂದಾಯ ಸಚಿವ ಆರ್.ಅಶೋಕ ಬಂದು ಅಗತ್ಯ ಸೌಲಭ್ಯ ಕಲ್ಪಿಸಲಿದ್ದಾರೆಂದು ಭರವಸೆ ನೀಡಿ ಗ್ರಾಮ ವಾಸ್ತವ್ಯಕ್ಕೆ ಮಂಗಳ ಹಾಡಿದರು.