
Gurupura Pocso Case- ಮಂಗಳೂರು- ಗುರುಪುರದಲ್ಲಿ ಭಿನ್ನಕೋಮಿನ ಜೋಡಿ ಪತ್ತೆ- ಅಪ್ರಾಪ್ತೆ ಮನೆಯವರಿಂದ ಕೇಸು ದಾಖಲು- ಗಾಂಜಾ ಸೇವಿಸಿ ಮೋಜು ಮಾಡಲು ಬಂದಿದ್ದ ಯುವಕರು!
ಮಂಗಳೂರು: ಮಂಗಳೂರು ನಗರದ ಹೊರವಲಯದಲ್ಲಿ ಇರುವ ಗುರುಪುರದ ಚಿಲಿಂಬಿ ಗುಡ್ಡದಲ್ಲಿ ಮೋಜು ಮಾಡಲು ಬಂದ ಯುವಕರಿಬ್ಬರು ಬಜರಂಗದಳ ಕಾರ್ಯಕರ್ತರಿಗೆ ಸಿಕ್ಕಿಬಿದ್ದಿದ್ದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಇಬ್ಬರು ಯುವಕರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಭಾನುವಾರ ಸಂಜೆಯ ವೇಳೆಗೆ ಗುರುಪುರದ ಚಿಲಿಂಬಿ ಗುಡ್ಡದಲ್ಲಿ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಈ ಯುವಕರು ಇಬ್ಬರು ಯುವತಿಯರ ಜೊತೆಗೆ ಬಂದಿದ್ದರು. ಇದನ್ನು ಗಮನಿಸಿದ ಬಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆ ವೇಳೆ, ಬಜರಂಗದಳದ ಕಾರ್ಯಕರ್ತರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದರು. ಈ ತಂಡದಲ್ಲಿ ಇದ್ದ ಇಬ್ಬರು ಯುವತಿಯರ ಪೈಕಿ ಒಬ್ಬಾಕೆ ಅಪ್ರಾಪ್ತ ಬಾಲಕಿಯಾಗಿದ್ದು, ಮತ್ತೊಬ್ಬಳು ಯುವತಿ. ಇವರಿಬ್ಬರು ಅನ್ಯಕೋಮಿನ ಪುರುಷರೊಂದಿಗೆ ಇದ್ದರು ಎನ್ನಲಾಗಿದೆ.
ಇಬ್ಬರು ಪುರುಷರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಯುವಕರು ಡ್ರಗ್ಸ್ ಸೇವಿಸಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯುವಕರಿಬ್ಬರ ಮೇಲೆ ಮಾದಕದ್ರವ್ಯ ನಿಷೇಧ ಕಾಯ್ದೆ (ಎನ್ ಡಿ ಪಿ ಎಸ್ ಆ್ಯಕ್ಟ್) ಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಇದೇ ವೇಳೆ ಅಪ್ರಾಪ್ತ ಬಾಲಕಿಯ ಮನೆಯವರು ಯುವಕರ ವಿರುದ್ಧ ದೂರು ನೀಡಿದ್ದು, ಅದರಂತೆ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರತ್ಯೇಕ ಪ್ರಕರಣವನ್ನು ದಾಖಲಿಸಲಾಗಿದೆ.