ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಿಯಾಗಲಿರುವ ಇಂಡೋನೇಷ್ಯಾದ ಅಧ್ಯಕ್ಷನ ಪುತ್ರಿ: ಮುಸ್ಲಿಂ ದೇಶದಲ್ಲಿ ಭಾರೀ ಸಂಚಲನ!
Monday, October 25, 2021
ಇಂಡೋನೇಷ್ಯಾ: ಇಸ್ಲಾಂ ಧರ್ಮವೇ ಅತೀ ದೊಡ್ಡ ಧರ್ಮವಾಗಿರುವ ಇಂಡೋನೇಷ್ಯಾದಲ್ಲಿ ಇದೀಗ ಭಾರೀ ಸಂಚಲನವೊಂದು ಸೃಷ್ಟಿಯಾಗಿದೆ. ಇಲ್ಲಿನ ಮಾಜಿ ಅಧ್ಯಕ್ಷ, ಇಂಡೋನೇಷ್ಯಾದ ಸ್ಥಾಪಕ ಸುಕರ್ಣೋ ಅವರ ಪುತ್ರಿ ಸುಕ್ಮಾವತಿ ಸುಕರ್ಣೋಪುತ್ರಿ(70) ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರ ಆಗಲಿರುವೆ ಎಂದು ಘೋಷಿಸಿದ್ದಾರೆ. ಈ ವಿಚಾರ ಮುಸ್ಲಿಂ ದೇಶವಾದ ಇಂಡೋನೇಷ್ಯಾದಲ್ಲಿ ಇದೀಗ ಭಾರಿ ಸಂಚಲನ ಮೂಡಿಸಿದೆ.
ಅ.26ರಂದು ಸುಕ್ಮಾವತಿಯವರ ಮತಾಂತರ ಕಾರ್ಯ ನಡೆಯಲಿದ್ದು, ಬಾಲಿ ಅಗುಂಗ್ ಸಿಂಗರಾಜದಲ್ಲಿ ಸುಕರ್ಣೋ ಸೆಂಟರ್ ಹೆರಿಟೇಜ್ ಏರಿಯಾದಲ್ಲಿ ಈ ಸಮಾರಂಭವನ್ನು ಆಯೋಜಿಸಲಾಗಿದೆ ಎನ್ನಲಾಗಿದೆ. ಈ ಮತಾಂತರಕ್ಕೆ ಸುಕ್ಮಾವತಿಯವರ ಮಕ್ಕಳು ಮತ್ತು ಕುಟುಂಬಸ್ಥರು ಸಂಪೂರ್ಣವಾಗಿ ಸಹಕಾರ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸುಕ್ಮಾವತಿಯವರ ವಕೀಲರಾದ ವಿಟಾರಿಯೊನೊ ಈ ಕುರಿತು ಸ್ಪಷ್ಟಪಡಿಸಿದ್ದಾರೆ.
ಸುಕ್ಮಾವತಿಯವರು ಸುಕರ್ಣೋ ಹಾಗೂ ಅವರ 3ನೇ ಪತ್ನಿ ಫಾತ್ಮವತಿಯ ಮೂರನೇ ಮಗಳು. ಅಲ್ಲದೆ ಇಂಡೋನೇಷಿಯಾದ ಅಧ್ಯಕ್ಷೆಯಾಗಿದ್ದ ಮೇಗಾವತಿಯವರ ಸಹೋದರಿ ಕೂಡ.
ಸುಕ್ಮಾವತಿಯವರು, ಹಿಂದೂ ಧರ್ಮಶಾಸ್ತ್ರದ ವಿಷಯಗಳನ್ನು ಚೆನ್ನಾಗಿ ಓದಿದ್ದಾರೆ. ಹಿಂದೂ ಧರ್ಮವೇ ಶ್ರೇಷ್ಠ ಎಂದು ತಿಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಧರ್ಮದಿಂದ ಪ್ರಭಾವಿತರಾಗಿರುವ ಅವರು ಮತಾಂತರಗೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂದು ವಕೀಲರಾದ ವಿಟಾರಿಯೊನೊ ಹೇಳಿಕೊಂಡಿದ್ದಾರೆ.
ಅದಲ್ಲದೆ 2018ರಲ್ಲಿ ಸುಕ್ಮಾವತಿ ಅವರು ಇಸ್ಲಾಂ ಧರ್ಮವನ್ನು ಅವಮಾನಿಸುವ ಕವಿತೆಯನ್ನು ಓದಿದ್ದರು. ಆ ಸಮಯದಲ್ಲಿ ಇದು ಭಾರಿ ವಿವಾದವನ್ನು ಸೃಷ್ಟಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಇಸ್ಲಾಮಿಕ್ ಗುಂಪುಗಳು ಸುಕ್ಮಾವತಿ ವಿರುದ್ಧ ಧರ್ಮದ್ರೋಹದ ಆರೋಪವನ್ನು ಮಾಡಿದ್ದರು. ಬಳಿಕ ಸುಕ್ಮಾವತಿಯವರು ಈ ಬಗ್ಗೆ ಕ್ಷಮೆಯನ್ನು ಕೂಡಾ ಕೇಳಿದ್ದರು ಎನ್ನಲಾಗಿದೆ.