ಪಾಕಿಸ್ತಾನಿ ಸುಂದರಿ ಹನಿಟ್ರ್ಯಾಪ್ ಗೊಳಗಾಗಿ ದೇಶದ್ರೋಹ ಎಸಗಿದ ಸೇನೆಯ ಗುಮಾಸ್ತ ಪೊಲೀಸ್ ಬಲೆಗೆ
Thursday, October 14, 2021
ನವದೆಹಲಿ: ರಾಜಸ್ಥಾನದ ಜೋಧಪುರ್ ವಲಯದ ಮಿಲಿಟರಿ ಚೀಫ್ ಇಂಜಿನಿಯರ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗುಮಾಸ್ತನೋರ್ವನನ್ನು ದೇಶ ದ್ರೋಹ ಎಸಗಿರುವ ಆರೋಪದ ಮೇಲೆ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಈತ ಪಾಕಿಸ್ತಾನಿ ಮಹಿಳೆಯೋರ್ವರ ಹನಿಟ್ರ್ಯಾಪ್ ಬಲೆ ಬಿದ್ದಿದ್ದು ಭಾರತೀಯ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಆಕೆಯ ಜೊತೆಗೆ ಹಂಚಿಕೊಳ್ಳುತ್ತಿದ್ದ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ಆರೋಪಿ ರಾಮ್ ಸಿಂಗ್(35) ಮಿಲಿಟರಿ ಇಂಜಿನಿಯರಿಂಗ್ ಸೇವೆಯಲ್ಲಿ ಫೇಸ್ಟುಕ್ ಜೋಧಪುರ ವಲಯದ ಮುಖ್ಯ ಇಂಜಿನಿಯರ್ ಕೈಕೆಳಗೆ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ.
ಈತನಿಗೆ ಕಳೆದ ಎರಡು ತಿಂಗಳಿನ ಹಿಂದೆ ವಾಟ್ಸ್‌ಆ್ಯಪ್ ಮೂಲಕ ಪಾಕಿಸ್ತಾನಿ ಮಹಿಳೆ ಸಂಪರ್ಕವಾಗಿದ್ದಾಳೆ. ಈತ ಮಹಿಳೆಯ ಬಣ್ಣದ ಮಾತಿಗೆ ಮತ್ತು ಆಕೆಯ ದೈಹಿಕ ಸೌಂದರ್ಯಕ್ಕೆ ಮಾರು ಹೋಗಿದ್ದಾನೆ. ಆ ಬಳಿಕ ಆಕೆ ಕೇಳಿದಂತೆ ಭಾರತೀಯ ಸೇನೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಾಟ್ಸ್ ಆ್ಯಪ್ ಮೂಲಕ ಹಂಚಿಕೊಳ್ಳುತ್ತಿದ್ದ ಎಂದು ರಾಜಸ್ಥಾನದ ಪೊಲೀಸ್ ಮಹಾನಿರ್ದೇಶಕ ( ಗುಪ್ತಚರ ) ಉಮೇಶ್ ಮಿಶ್ರಾ ತಿಳಿಸಿದ್ದಾರೆ.
ನಾಲ್ಕನೇ ವರ್ಗದ ಉದ್ಯೋಗಿಯಾಗಿದ್ದ ಆರೋಪಿ ರಾಮ್ ಸಿಂಗ್, ತನ್ನ ಮೊಬೈಲ್ ಫೋನ್ ಮೂಲಕ ದಾಖಲೆಗಳ ಫೋಟೋಗಳನ್ನು ಕಳುಹಿಸುತ್ತಿದ್ದ ಎಂದು ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀಸರು ಆರೋಪಿ ರಾಮ್ ಸಿಂಗ್ ನನ್ನು ಬಂಧಿಸಿದ್ದಾರೆ. ಪೊಲೀಸರು ಆತನ ಮೊಬೈಲ್ ಫೋನ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಆತ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ರವಾನೆ ಮಾಡುತ್ತಿರುವುದು ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.