ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಎಡವಟ್ಟು- ಹೆಣ್ಣು ಮಗುವಿನ ಬದಲಿಗೆ ಗಂಡು ಮಗುವನ್ನು ಕೊಟ್ಟ ಆರೋಪ- ಮಗುವಿನ ತಾಯಿಯ ರೋಧನ
Friday, October 15, 2021
ಮಂಗಳೂರು; ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಪೋಷಕರಿಗೆ ಮಗು ಬದಲಾಯಿಸಿ ನೀಡಿದ ಬಗ್ಗೆ ಆರೋಪ ಕೇಳಿಬಂದಿದ್ದು ಮಂಗಳೂರಿನ ಬಂದರ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಕುಟುಂಬ ಮಗು ಬದಲಾವಣೆಯಿಂದ ರೋಧಿಸುತ್ತಿದೆ. ಬ್ರಹ್ಮಾವರದ ಮುಸ್ತಫಾ ಎಂಬವರ ಪತ್ನಿ ಅಮ್ಬ್ರಿನಾ ಅವರು ಸೆಪ್ಟೆಂಬರ್ 28 ರಂದು ಹೆರಿಗೆಗಾಗಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಾಗಿದ್ದರು.
ಇವರಿಗೆ ಹೆರಿಗೆಯಾದಾಗ ಮಗು ಹೆಣ್ಣು ಎಂದು ಹೇಳಲಾಗಿತ್ತು. ಮಗು ಅನಾರೋಗ್ಯವಾಗಿರುವುದರಿಂದ ಐಸಿಯುವಿನಲ್ಲಿ ಇರಿಸಿ ತಾಯಿ ಕೈಗೆ ನೀಡಿರಲಿಲ್ಲ. ಎರಡು ಬಾರಿ ಮಗುವಿನ ತಾಯಿ ಐಸಿಯುವಿನಲ್ಲಿ ಮಗುವನ್ನು ನೋಡಿದ್ದು ಆಗ ಮಗು ಹೆಣ್ಣಾಗಿತ್ತು.
ಇದರ ನಡುವೆ ಮಗುವಿಗೆ ಆರೋಗ್ಯ ಸಮಸ್ಯೆ ಕಾಡಿದ್ದು ಪೋಷಕರು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ . ಅದಕ್ಕೆ ಒಪ್ಪಿದ ಆಸ್ಪತ್ರೆ ವೈದ್ಯರು ಮಗುವನ್ನು ಸುತ್ತಿ ಆ್ಯಂಬುಲೆನ್ಸ್ ನಲ್ಲಿ ಬ್ರಹ್ಮಾವರ ಆಸ್ಪತ್ರೆಗೆ ಕಳುಹಿಸಿದ್ದರು.
ಆದರೆ ಬ್ರಹ್ಮವರ ಆಸ್ಪತ್ರೆಯಲ್ಲಿ ಮಗುವನ್ನು ನೋಡಿದಾಗ ಮಗು ಗಂಡು ಆಗಿತ್ತು. ಈ ಮೊದಲೆಲ್ಲ ಹೆಣ್ಣು ಮಗು ಎಂದು ಹೇಳಿದ ಆಸ್ಪತ್ರೆ ಗಂಡು ಮಗು ನೀಡಿತ್ತು.
ಆಸ್ಪತ್ರೆಯಲ್ಲಿ ವಿಚಾರಿಸಿದರೆ "ಹುಟ್ಟಿದ ಮಗು ಗಂಡು. ದಾಖಲೆಯಲ್ಲಿ ಬರೆಯುವಾಗ ತಪ್ಪಾಗಿ ಹೆಣ್ಣು ಎಂದು ಬರೆಯಲಾಗಿದೆ" ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ತಾಯಿ ಅಮ್ಬ್ರಿನಾ ತನ್ನ ಮಗುವಿಗಾಗಿ ರೋಧಿಸುತ್ತಿದ್ದಾರೆ. ಬಂದರ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.